ಜನಾರ್ದನ ರೆಡ್ಡಿಯನ್ನು ಬಿಜೆಪಿಗೆ ಮರು ಸೇರ್ಪಡೆಗೊಳಿಸುವಂತೆ ಅಮಿತ್ ಶಾರನ್ನು ಒತ್ತಾಯಿಸಿದ್ದೇನೆ: ಶ್ರೀರಾಮುಲು

|

Updated on: Mar 01, 2024 | 8:31 AM

ಕಲ್ಯಾಣ ರಾಜ್ಯ ಪ್ರಗತಿಪಕ್ಷದ ನಾಯಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ಇದೀಗ ಮತ್ತೆ ಮಾತುಕತೆ ಆರಂಭವಾದ ಸುಳಿವು ಲಬ್ಯವಾಗಿದೆ. ರೆಡ್ಡಿಯವರನ್ನು ಮರಳಿ ಪಕ್ಷಕ್ಕೆ ಸೇರಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಹೇಳಿರುವುದಾಗಿ ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿಯನ್ನು ಬಿಜೆಪಿಗೆ ಮರು ಸೇರ್ಪಡೆಗೊಳಿಸುವಂತೆ ಅಮಿತ್ ಶಾರನ್ನು ಒತ್ತಾಯಿಸಿದ್ದೇನೆ: ಶ್ರೀರಾಮುಲು
ಶ್ರೀರಾಮುಲು
Follow us on

ಬೆಂಗಳೂರು, ಮಾರ್ಚ್​ 1: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ (Janardhana Reddy) ಅವರನ್ನು ಬಿಜೆಪಿಗೆ (BJP) ಮರು ಸೇರ್ಪಡೆಗೊಳಿಸುವಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit Shah) ಅವರನ್ನು ಒತ್ತಾಯಿಸಿರುವುದಾಗಿ ಮಾಜಿ ಸಚಿವ ಬಿ ಶ್ರೀರಾಮುಲು (B Sriramulu) ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಅಮಿತ್ ಶಾ ನನ್ನ ಅಭಿಪ್ರಾಯ ಕೇಳಿದ್ದರು. ರೆಡ್ಡಿ ಅವರಿಗೆ ಕ್ಷೇತ್ರದಲ್ಲಿ ವರ್ಚಸ್ಸು ಇದೆ, ಅವರನ್ನು ಪಕ್ಷಕ್ಕೆ ಮರಳಿ ಕರೆತಂದರೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಹೇಳಿದ್ದೇನೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳಿಯೂ ಈ ವಿಚಾರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ಮತ್ತು ನನ್ನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ಪಕ್ಷಕ್ಕೆ ಬಂದರೆ ನಾವು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಆತ್ಮಸಾಕ್ಷಿಯ ಮತ ಹಾಕಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಮುಲು, ಅದು ಅವರ ಪಕ್ಷದ ನಿರ್ಧಾರ ಮತ್ತು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ಜನಾರ್ದನ ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಸಮಸ್ಯೆ ಇರಲಿಲ್ಲ. ಆದರೆ, ಅವರು ಹೊಸ ಪಕ್ಷ ಕಟ್ಟಿದ್ದರಿಂದ ರಾಜಕೀಯವಾಗಿ ವೈಮನಸ್ಸು ಉಂಟಾಗಿತ್ತು. ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿಯವರನ್ನು ಬಿಜೆಪಿಗೆ ಮರಳಿ ಸೇರ್ಪಡೆಗೊಳಿಸುವ ಯತ್ನ ನಡೆಯುತ್ತಿದೆ ಎಂದು ಕಳೆದ ತಿಂಗಳು ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದರು.

ಇದನ್ನೂ ಓದಿ: ಶ್ರೀರಾಮುಲು ಮೂಲಕ ಜನಾರ್ಧನ ರೆಡ್ಡಿಯವರನ್ನು ಬಿಜೆಪಿಗೆ ವಾಪಸ್ಸು ತರುವ ಪ್ರಯತ್ನ ನಡೆದಿದೆ: ಗಾಲಿ ಸೋಮಶೇಖರ ರೆಡ್ಡಿ

ರೆಡ್ಡಿ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಬಲ ವೃದ್ಧಿಯಾಗಲಿದೆ. ಸದ್ಯ ರಾಮುಲು ಮೂಲಕ ಪ್ರಯತ್ನ ನಡೆಯುತ್ತಿದ್ದು, ಇದು ಫಲಪ್ರದವಾಗಬಹುದು ಎಂದು ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟಿದ್ದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ಹಿಂದೆ ವಿವಿಧ ಕಾರಣಗಳಿಂದಾಗಿ ಪಕ್ಷದೊರೆದು ಹೋದವರನ್ನು ಮರಳಿ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಬಿಜೆಪಿ ನಿರತವಾಗಿದೆ. ಇತ್ತೀಚೆಗಷ್ಟೇ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಇವರು ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಅಥವಾ ಹಾವೇರಿ ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ