ಬಳ್ಳಾರಿಯಲ್ಲಿ ನ.6ರಂದು ರಾಜ್ಯಮಟ್ಟದ ಬೃಹತ್ ಎಸ್ಟಿ ಸಮಾವೇಶ ಆಯೋಜಿಸಿದ ಬಿಜೆಪಿ
ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾದ ಬೆನ್ನಲ್ಲೆ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ನ.6ರಂದು ರಾಜ್ಯಮಟ್ಟದ ಎಸ್ಟಿ ಸಮಾವೇಶವನ್ನು ಆಯೋಜಿಸಿದೆ.
ಬಳ್ಳಾರಿ: ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾದ ಬೆನ್ನಲ್ಲೆ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ನ.6ರಂದು ರಾಜ್ಯಮಟ್ಟದ ಬೃಹತ್ ಎಸ್ಟಿ ಸಮಾವೇಶವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಎಂಬ ಮಾಹಿತಿಯನ್ನು ಮನೆ ಮನೆಗೆ ಮುಟ್ಟಿಸಲು ಯೋಜನೆ ರೂಪಿಸಿದೆ.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ ಹಿನ್ನೆಲೆ ಬಿಜೆಪಿ ನಾಯಕರು ಪ್ರಮುಖರ ಸಭೆ ಕರೆದಿದ್ದು, ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ವೇಳೆ ಸಚಿವ ಆನಂದ ಸಿಂಗ್, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ, ಸಿರಗುಪ್ಪ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಎನ್.ವೈ ಗೋಪಾಲಕೃಷ್ಣ, ಹೇಮಲತಾ ನಾಯಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ. ಸಂಸದರಾದ ಕರಡಿ ಸಂಗಣ್ಣ, ದೇವೇಂದ್ರಪ್ಪ, ಮಾಜಿ ಸಂಸದೆ ಜೆ ಶಾಂತಾ, ಮಾಜಿ ಶಾಸಕ ಸುರೇಶಬಾಬು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಅಕ್ಟೋಬರ್ 20ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ಪಡೆಯಲಿದೆ. ಅನುಮೋದನೆ ಪಡೆದ ಬಳಿಕ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ. ನಂತರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sat, 22 October 22