ಪ್ರಧಾನಿ ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ ಮದುವೆ ಆಗಲ್ಲ: ಬಸವರಾಜ ಬೊಮ್ಮಾಯಿ

|

Updated on: Jun 25, 2023 | 4:09 PM

ಬಿಹಾರದಲ್ಲಿ ವಿಪಕ್ಷಗಳು ಸಭೆ ನಡೆಸಿರುವ ಬಗ್ಗೆ ಟೀಕಿಸಿದ ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅವುಗಳು ದೇಶ ಉದ್ಧಾರದ ಬಗ್ಗೆ ಚರ್ಚಿಸಿಲ್ಲ, ಮೋದಿಯನ್ನು ಹೇಗೆ ಸೋಲಿಸುವುದು ಎಂದು ಚರ್ಚಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ ಮದುವೆ ಆಗಲ್ಲ: ಬಸವರಾಜ ಬೊಮ್ಮಾಯಿ
ಬಿಹಾರದಲ್ಲಿ ನಡೆದ ವಿಪಕ್ಷಗಳ ಸಭೆಯನ್ನು ಟೀಕಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಳಗಾವಿ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಸಿದ ಸಭೆಯಲ್ಲಿ ವಿಪಕ್ಷಗಳ ನಾಯಕರು ದೇಶ ಉದ್ಧಾರ ಮಾಡುವ ಬಗ್ಗೆ ಚರ್ಚೆ ನಡೆಸಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸೋಲಿವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ (Rahul Gandhi) ಮದುವೆ ಆಗಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭೆ, ವಿಧಾನಸಭೆಯೇ ಬೇರೆ ಬೇರೆ ಆಗಿದೆ. ಮಗದೊಮ್ಮೆ ಮೋದಿ ಅವರನ್ನ ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಅವರು ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ ನೀರನ್ನು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. ಅದರಂತೆ 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದ್ದಾರೆ. ದೇಶ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಕೂಡ ಮೋದಿ ಎಂದು ಹೇಳಿದರು.

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕೈ ಬಿಡುವಂತೆ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಮನವಿ‌

ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ‌ ಎಂದ ಬೊಮ್ಮಾಯಿ, ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. 5,000 ಕೋಟಿ ಅನುದಾನದವನ್ನು ಉತ್ತರ ಕರ್ನಾಟಕ ನೀರಾವರಿಗೆ ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ. ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಜನರಿಗೆ ಗೊತ್ತಾಗಲಿದೆ ಎಂದರು.

ರಾಜಕಾರಣದಲ್ಲಿ ರಾಜಿ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಚುನಾವಣೆ ಸಮಯದಲ್ಲಿ ಕೆಲವು ಬಿಜೆಪಿ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷಿಯ ನಾಯಕರೇ ಆರೋಪಿಸಿದ್ದರು. ಈ ಬಗ್ಗೆ ಮಾತನಾಡಿದ ಬೊಮ್ಮಾಯಿ, ರಾಜಕಾರಣದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ, ಮಾಡಿಕೊಳ್ಳಲ್ಲ. ಸೌಹಾರ್ದಯುತವಾಗಿ ಮನೆಗೆ ಬರುವವರನ್ನು ಬೇಡವೆನ್ನಲು ಆಗಲ್ಲ. ಮನೆಗೆ ಹೋಗದೆ ಕೆಲವರು ರಾಜಿ ಮಾಡಿಕೊಂಡಿದ್ದಾರೆ. ಬಿಜೆಪಿ ತಾಯಿ ಸಮಾನ, ಕಾರ್ಯಕರ್ತರು ಅಣ್ಣತಮ್ಮಂದಿರ ಸಮಾನ. ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸವನ್ನು ಮಾಡಿಲ್ಲ ಎಂದು ಹೇಳುವ ಮೂಲಕ ಶಾಸಕ ಬಸಜನಗೌಡ ಪಾಟೀಲ್ ಯತ್ನಾಳ್​ಗೆ ಟಾಂಗ್​ ಕೊಟ್ಟರು.

ಕೆಎಸ್​ಆರ್​ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ: ಬೊಮ್ಮಾಯಿ

ರಾಜ್ಯದಲ್ಲಿ ಕೆಎಸ್​ಆರ್​ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಡೀಸೆಲ್ ಇಲ್ಲದೇ ಬಸ್​ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಇಡೀ ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಎಲ್ಲರಿಗೂ ಉಚಿತ ಎಂದು ಹೇಳಿದ ಕಾಂಗ್ರೆಸ್​ ನಾಯಕರು ಅಧಿಕಾರಕ್ಕೇರಿದ ನಂತರ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು. ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟಿಸಲು ಕಾಂಗ್ರೆಸ್​​ ನಾಯಕರಿಗೆ ಯಾವ ನೈತಿಕತೆ ಇದೆ? ಸರ್ಕಾರದಲ್ಲಿದ್ದುಕೊಂಡು ಕಾಂಗ್ರೆಸ್​ನವರೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ರೇಟ್ ಫಿಕ್ಸ್ ಆರೋಪ ಮಾಡಿದ ಬೊಮ್ಮಾಯಿ

ಬಿಜೆಪಿ ಸರ್ಕಾರದ ಮೇಲೆ ಪರ್ಸಂಟೇಜ್ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ನಂತರ ರೇಟ್ ಫಿಕ್ಸ್ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರರನ್ನು ಕರೆದು ಏನ್ ಹೇಳಿದ್ದಾರೆ ಗೊತ್ತು. ಎಲ್ಲಾ ಕಡೆಗಳ ಪರ್ಸಂಟೇಜ್ ಫಿಕ್ಸ್ ಆಗುತ್ತಿವೆ. ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ