ಬೆಳಗಾವಿ ರಾಜಕಾರಣ: ರಮೇಶ್ ಜಾರಕಿಹೊಳಿ vs ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿ ಪೈಪೋಟಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2022 | 1:30 PM

ರಮೇಶ್ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ‘ಹಮ್ ಭಿ ತಯಾರ್ ಹೈ, ಮೈದಾನ್ ಖುಲ್ಲಾ ಹೈ’ ಎಂದು ಪರೋಕ್ಷವಾಗಿ ಪಂಥಾಹ್ವಾನ ನೀಡಿದ್ದರು.

ಬೆಳಗಾವಿ ರಾಜಕಾರಣ: ರಮೇಶ್ ಜಾರಕಿಹೊಳಿ vs ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿ ಪೈಪೋಟಿ
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್
Follow us on

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2022) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ರಾಜಕಾರಣ ಗರಿಗೆದರಿದೆ. ‘ಸಾಹುಕಾರ್’ ಎಂದೇ ಜನರ ನಡುವೆ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಕಾಂಗ್ರೆಸ್​ನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನಡುವೆ ನೇರ ಹಣಾಹಣಿಗೆ ಕದನಕಣ ಸಿದ್ಧವಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರವಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಕ್ರಿಯವಾಗುತ್ತಿರುವ ಅವರ ಸಂಘಟನೆ ಚುರುಕುಗೊಳಿಸಿದ್ದಾರೆ. ‘ಮೈದಾನ್ ಖುಲ್ಲಾ ಹೈ’ ಎಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹಲವು ರೀತಿಯಲ್ಲಿ ಸವಾಲು ಹಾಕಲು ಮುಂದಾಗಿದ್ದಾರೆ.

ಲೈಂಗಿಕ ಹಗರಣದಲ್ಲಿ ಸುದ್ದಿಯಾಗಿ ಸಚಿವ ಸ್ಥಾನ ಕಳೆದುಕೊಂಡ ನಂತರ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವೇದಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಸಾಕಷ್ಟು ಸಮಯದ ನಂತರ ನಿನ್ನೆ (ಡಿ 24) ಮತ್ತೆ ಅಧಿಕೃತವಾಗಿ ಗುಡುಗಿದರು. ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸಬೇಕು’ ಎಂದು ಕರೆ ನೀಡಿದರು. ಈಗಾಗಲೇ ತಮ್ಮ ಶಿಷ್ಯ ನಾಗೇಶ್ ಮನೋಳ್ಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಹಿರಿಯ ನಾಯಕರಾದ ಬಿ.ಎಲ್.ಸಂತೋಷ್, ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.

ಇದೀಗ ಕ್ಷೇತ್ರದಲ್ಲಿ ಶಿಷ್ಯನ ಪರ ಹವಾ ಸೃಷ್ಟಿಸಲು ಗ್ರಾಮೀಣ ಕ್ಷೇತ್ರದ ಮತದಾರರ ಸಂಘವೊಂದನ್ನು ರೂಪಿಸಿ, ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಅಧಿಕೃತವಾಗಿ ಕಚೇರಿಯನ್ನೂ ಉದ್ಘಾಟಿಸಿದರು. ಈ ಮೂಲಕ ಹೆಬ್ಬಾಳ್ಕರ್ ವಿರುದ್ಧ ತಮ್ಮ ಆಪ್ತಶಿಷ್ಯನನ್ನೇ ಅಧಿಕೃತವಾಗಿ ಅಖಾಡಕ್ಕೆ ಇಳಿಸುವುದಾಗಿ ರಮೇಶ್ ಜಾರಕಿಹೊಳಿ ಸಾರಿ ಹೇಳಿದಂತೆ ಆಗಿದೆ. ಕಚೇರಿ ಉದ್ಘಾಟನೆ ವೇಳೆ ಎಲ್ಲಿಯೂ ಹೆಸರು ಪ್ರಸ್ತಾಪಿಸದೇ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು. ನಮ್ಮ ಕಡೆಯಿಂದ ನಾಗೇಶ್ ಮನೋಳ್ಕರ್ ನಿಲ್ಲಿಸುತ್ತೇವೆ ಎಂದು ವರಿಷ್ಠರಿಗೆ ತಿಳಿಸಿದ್ದೇನೆ. ಅವರು ಬೇಡ ಎಂದರೆ ನೀವು ಯಾರಿಗೆ ಹೇಳಿದರೂ ಬೆಂಬಲಿಸುವ ಭರವಸೆ ಕೊಟ್ಟಿದ್ದೇನೆ. ಕಳೆದ ಬಾರಿ ಅವರ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸಿದ್ದೆವು. ಆದರೆ ಗೆದ್ದ ಒಂದೇ ತಾಸಿನಲ್ಲಿ ನಮ್ಮೆಲ್ಲರ ತಲೆ ಮೇಲೆ ಕುಳಿತರು ಎಂದು ಟೀಕಿಸಿದರು.

ಅವರು ಎನೇನೋ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ ಆಗಲಿ. 2023ರಲ್ಲಿ 25 ಸಾವಿರ ಮತದಿಂದ ಗೆಲ್ಲಿಸುತ್ತೇವೆ. ಜನವರಿಯ ನಂತರ ಎಲ್ಲ ಜಿಪಂ ಕ್ಷೇತ್ರಗಳಲ್ಲಿ ಸಭೆ ನಡೆಸುತ್ತೇವೆ. ಕಾಂಗ್ರೆಸ್​ನಲ್ಲಿ ಲೀಡರ್​ಗಳ ದಂಡು ಜಾಸ್ತಿ. ಬಿಜೆಪಿಯಲ್ಲಿ ಕಾರ್ಯಕರ್ತರ ದಂಡು ಜಾಸ್ತಿ. ಲೀಡರ್ ಎನೇ ಮಾಡಿಕೊಂಡ್ರೂ ನಮ್ಮಲ್ಲಿ ಕಾರ್ಯಕರ್ತರಿಗೆ ಎಲ್ಲ ಶಕ್ತಿ ತುಂಬುತ್ತೇವೆ. ದೇವರ ಮೇಲೆ ಪ್ರಮಾಣ ಮಾಡಿ ಬಿಜೆಪಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಅಂತಾ ದೃಢಸಂಕಲ್ಪ ಮಾಡೋಣ ಎಂದು ಹೇಳಿದರು.

ಜಾರಕಿಹೊಳಿಗೆ ಪಂಥಾಹ್ವಾನ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

ರಮೇಶ್ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ‘ಹಮ್ ಭಿ ತಯಾರ್ ಹೈ, ಮೈದಾನ್ ಖುಲ್ಲಾ ಹೈ’ ಎಂದು ಪರೋಕ್ಷವಾಗಿ ಪಂಥಾಹ್ವಾನ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ರಮೇಶ್ ಜಾರಕಿಹೊಳಿ ರೊಕ್ಕ ಕೊಟ್ಟು ಒಂದು ಸಾರಿ ಗೆದ್ದು ಬರ್ತಾರೆ, ಪದೇ ಪದೇ ದುಡ್ಡಿನ ಮೇಲೆ ನಡೆಯುವುದಿಲ್ಲ. ಜಾತಿ ವಿಚಾರದಲ್ಲಿ ಇಲ್ಲಿಗೆ ಬಂದು ಮನುಷ್ಯತ್ವದ ಭಾಷಣ ಮಾತಾಡೋಡು. ಬೇರೆ ಕಡೆ ಎದೆ ತಟ್ಟಿ ಬೇರೆ ಜಾತಿ ಹೇಳುವುದು. ಮರಾಠಿಗರ ಬಳಿ ಬಂದು ಇನ್ಸಾನ್ ಹೂಂ ಅಂತಾ ಭಾಷಣ ಮಾಡೋದು ಜನ ಎಲ್ಲಾ ನಾಟಕ ನೋಡ್ತಿದ್ದಾರೆ. ಕಳೆದ ಬಾರಿ ಗ್ರಾಮೀಣ ಭಾಗದಲ್ಲಿ ಸಂಜಯ್ ಪಾಟೀಲ್ ಶಾಸಕರಿದ್ದಾಗ ಜಿ.ಪಂ, ಗ್ರಾ.ಪಂ ಸದಸ್ಯರನ್ನ ಯಾರು ಗೆಲ್ಲಿಸಿದ್ದು ಅಂತಾ ಈ ಬಾರಿ ಸಾಬೀತಾಗುತ್ತೆ ಎಂದರು.

ವರದಿ: ಸಹದೇವ ಮಾನೆ, ಬೆಳಗಾವಿ

ಬೆಳಗಾವಿ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Sun, 25 December 22