Bengaluru-Mysuru Expressway: ಪ್ರತಾಪ್ ಸಿಂಹ ಮಿನಿಸ್ಟ್ರೇನ್ರೀ? ಕೇವಲ ಸಂಸದ ಅಷ್ಟೇ: ಸಿದ್ದರಾಮಯ್ಯ

|

Updated on: Mar 09, 2023 | 11:54 AM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ವಿಚಾರದ ಕ್ರೆಡಿಟ್ ವಾರ್ ಮುಂದುವರಿದಿದ್ದು, ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ಜೆಡಿಎಸ್​ ಪಾಲೂ ಇದೆ ಎಂದು ಜಿಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಹೇಳಿದರೆ, ಇನ್ನೊಂದೆಡೆ ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

Bengaluru-Mysuru Expressway: ಪ್ರತಾಪ್ ಸಿಂಹ ಮಿನಿಸ್ಟ್ರೇನ್ರೀ? ಕೇವಲ ಸಂಸದ ಅಷ್ಟೇ: ಸಿದ್ದರಾಮಯ್ಯ
ಸಿದ್ದರಾಮಯ್ಯ (ಎಡಚಿತ್ರ) ಮತ್ತು ಪ್ರತಾಪ್ ಸಿಂಹ (ಬಲ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದ ಕ್ರೆಡಿಟ್ ವಾರ್ ಮುಂದುವರಿದಿದ್ದು, ಬಿಜೆಪಿ, ಕಾಂಗ್ರೆಸ್ ನಂತರ ಜೆಡಿಎಸ್​ ಕೂಡ ಎಂಟ್ರಿಕೊಟ್ಟಿದೆ. ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ಜೆಡಿಎಸ್​ ಪಾಲೂ ಇದೆ ಎಂದು ಜಿಡಿಎಸ್ ಶಾಸಕ ಸಿಎಸ್ ಪುಟ್ಟರಾಜು (CS Puttaraju) ಹೇಳಿದ್ದಾರೆ. ಅಲ್ಲದೆ, ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ವಾಗ್ದಾಳಿ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಏನು ಸಚಿವರಾ? ಅವರು ಒಬ್ಬ ಸಂಸದ ಅಷ್ಟೇ. ಈ ಹೆದ್ದಾರಿ ಪೂರ್ತಿ ಪ್ರತಾಪ್​ ಸಿಂಹ ಕ್ಷೇತ್ರದಲ್ಲಿ ಬರುತ್ತಾ? ಕಳಸವಾಡಿವರೆಗೆ ಮಾತ್ರ ಪ್ರತಾಪ್ ಸಿಂಹ ಕ್ಷೇತ್ರ ಬರುತ್ತೆ ಅಷ್ಟೇ. ಮಂಡ್ಯ, ರಾಮನಗರ ಜಿಲ್ಲೆಯಲ್ಲೂ ಹೆದ್ದಾರಿ ಹಾದುಹೋಗುತ್ತದೆ ಎಂದರು. ಅಲ್ಲದೆ, ನಾನು ಹೆದ್ದಾರಿ ವೀಕ್ಷಿಸಲು ಹೋಗುತ್ತಿಲ್ಲ. ಮಾಜಿ ಸಚಿವ ಹೆಚ್​.ಸಿ.ಮಹದೇವಪ್ಪ ವೀಕ್ಷಣೆ ಮಾಡುತ್ತಾರೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಮಾಡಿದವರು ನಾವು. ಹೀಗಾಗಿ, ಅದರ ಕ್ರೆಡಿಟ್‌ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಯೋಜನೆಯಲ್ಲಿ ಸಂಸದ ಪ್ರತಾಪ್ ಸಿಂಹನದ್ದಾಗಲೀ ಬಿಜೆಪಿಯದ್ದಾಗಲೀ ಯಾವುದೇ ಪಾತ್ರವಿಲ್ಲ. ಸುಮ್ಮನೇ ಅವರೇ ಮಾಡಿಸಿದ್ದು ಎಂದುಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಮ್ ಆಗಿದ್ದಾಗ ಅತಿಥಿಗಳ ಕಾಫಿ-ತಿಂಡಿಗಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ: ಎನ್ ಆರ್ ರಮೇಶ್, ಬಿಜೆಪಿ ಮುಖಂಡ

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದ ಸಂಸದ ಪ್ರತಾಪ್ ಸಿಂಹ, ನಮ್ಮಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣಗೊಂಡಿದೆ. ವಿನಾಕಾರಣ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. 2 ತಿಂಗಳು ಕಾಯಿರಿ, ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ. ಅವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗುತ್ತಾರೆ. ನಂತರ ಅವರು ಪ್ರವಾಸ ಮಾಡಲಿ. ಮಕ್ಕಳು, ಮೊಮ್ಮಕ್ಕಳ ಜತೆ ಬೆಂಗಳೂರು-ಮೈಸೂರು ಟ್ರಿಪ್ ಮಾಡಲಿ ಎಂದು ವ್ಯಂಗ್ಯವಾಡಿದ್ದರು.

ಹೆದ್ದಾರಿ ಕ್ರೆಡಿಟ್ ವಾರ್​ಗೆ ಎಂಟ್ರಿ ಕೊಟ್ಟ ಜೆಡಿಎಸ್

ಮೈಸೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ. ಈ ನಡುವೆ ಎಂಟ್ರಿಕೊಟ್ಟ ಜೆಡಿಎಸ್ ಹೆದ್ದಾರಿ ನಿರ್ಮಾಣದಲ್ಲಿ ನಮ್ಮದು ಪಾಲೂ ಇದೆ ಎಂದಿದೆ. ಮೈಸೂರು ನಗರದಲ್ಲಿ ಹೇಳಿಕೆ ನೀಡಿದ ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು, ಪ್ರತಾಪ್ ಸಿಂಹ ಹೆಜ್ಜೆ ಹೆಜ್ಜೆಗೂ ಚೀಫ್ ಇಂಜಿನಿಯರ್ ರೀತಿ ಆಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಾಪ್‌ ಸಿಂಹಗೆ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದೆಯೇ? ಇಡೀ ಯೋಜನೆ ನಾನು ಮಾಡಿಸಿದ್ದೇನೆ ಅಂತಾ ಓಡಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೇನೆ ಅಂತ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ. ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯೋಜನೆಯ ಅಲೈನ್‌ಮೆಂಟ್ ಮಾಡಿ ಅನುಮೋದನೆ ನೀಡದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು? ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಸಹಕಾರ ಕೊಡಲೇಬೇಕಿತ್ತು. ಈ ಹೆದ್ದಾರಿಯಿಂದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ. ಚನ್ನಪಟ್ಟಣ, ರಾಮನಗರ, ಶ್ರೀರಂಗಪಟ್ಟಣ ಕುಟುಂಬಗಳು ಬೀದಿಗೆ ಬಂದಿವೆ ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:54 am, Thu, 9 March 23