ಸಚಿವ ಸೋಮಣ್ಣ ಮುನಿಸು ಶಮನಕ್ಕೆ ಸಿಎಂ ಬೊಮ್ಮಾಯಿ ಯತ್ನ; ಸೋಮಣ್ಣ ನಡೆ ಇನ್ನೂ ನಿಗೂಢ

ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸಚಿವ ವಿ.ಸೋಮಣ್ಣ ಮುನಿಸು ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಮುನಿಸು ಶಮನಕ್ಕೆ ಸಿಎಂ ಬೊಮ್ಮಾಯಿ ಮತ್ತು ಸಚಿವ ಆರ್ ಅಶೋಕ್ ಯತ್ನಿಸುತ್ತಿದ್ದಾರೆ. ನಿನ್ನೆ ತಡರಾತ್ರಿಯೂ ಸಿಎಂ ನಿವಾಸದಲ್ಲಿ ಸಮಾಧಾನ ನಡೆಸುವ ಯತ್ನ ನಡೆದಿದೆ.

ಸಚಿವ ಸೋಮಣ್ಣ ಮುನಿಸು ಶಮನಕ್ಕೆ ಸಿಎಂ ಬೊಮ್ಮಾಯಿ ಯತ್ನ; ಸೋಮಣ್ಣ ನಡೆ ಇನ್ನೂ ನಿಗೂಢ
ವಿ.ಸೋಮಣ್ಣ ಮತ್ತು ಬಸವರಾಜ ಬೊಮ್ಮಾಯಿ
Follow us
|

Updated on: Mar 09, 2023 | 12:55 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹೊಸ್ತಿಲಲ್ಲಿ ಸಚಿವ ವಿ.ಸೋಮಣ್ಣ (V Somanna) ಅವರ ಮುನಿಸು ಬಿಜೆಪಿಗೆ (BJP Karnataka) ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಂತೆ ಸಚಿವರ ಮುನಿಸು ಶಮನದ ಯತ್ನದ ಹೊಣೆಯನ್ನು ಕಂದಾಯ ಸಚಿವ ಆರ್.ಅಶೋಕ್ (R Ashok) ಹೊತ್ತುಕೊಂಡಿದ್ದಾರೆ. ಅದರಂತೆ ನಿನ್ನೆ (ಮಾಚ್ 8) ಸಂಜೆ 6.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿದ್ದ ಸೋಮಣ್ಣ ಅವರು ಮಾತುಕತೆ ನಡೆಸಿದ್ದರು. ಬಳಿಕ ತಡರಾತ್ರಿ ಸಚಿವ ಅಶೋಕ್ ಅವರು ಸೋಮಣ್ಣ ಅವರನ್ನು ಸಿಎಂ ನಿವಾಸಕ್ಕೆ ಕರೆದೊಯ್ದು ಮುನಿಸು ಶಮನ ಮಾಡುವ ಯತ್ನ ನಡೆಸಿದರು. ಈ ಸಂಧಾನ ಮಾತುಕತೆ ತಕ್ಷಣಕ್ಕೆ ಯಶಸ್ವಿಯಾಗಿದೆ ಎನ್ನಲಾಗುತ್ತಿದ್ದರೂ ಸೋಮಣ್ಣ ನಡೆ ನಿಗೂಢವಾಗಿದೆ.

ಪಕ್ಷದೊಳಗಿನ ಕೆಲವೊಂದು ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಸಚಿವ ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಲು ಆರಂಭಿಸಿತು. ಸೋಮಣ್ಣ ಅವರು ಪಕ್ಷದ ಮೇಲೆ ಮುನಿಸುಗೊಳ್ಳಲು ಆರಂಭಿಸಿದ ನಂತರ ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಭೇಟಿ ಮುನಿಸು ಶಮನಗೊಳಿಸುವುದಾಗಿದೆ ಎನ್ನಲಾಗಿದೆ.

ಅಷ್ಟು ಮಾತ್ರವಲ್ಲದೆ, ರಾಜಾಜಿನಗರ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿ. ಸೋಮಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯೂ ಹಬ್ಬಿತ್ತು. ಇದರ ಪರಿಣಾಮ, ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್​. ಮನೋಹರ್ ಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಸೋಮಣ್ಣ ಪಕ್ಷ ಸೇರುವ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಸೇರುವ ಬಗ್ಗೆ ಸೋಮಣ್ಣ ಆಗಲೀ ಬೇರೆ ಯಾರೇ ಆಗಲಿ ತನ್ನೊಂದಿಗೆ ಮಾತಾಡಿಲ್ಲ, ಎಲ್ಲರೂ ಪಕ್ಷದ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದಿದ್ದರು. ಅದಾಗ್ಯೂ, ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಅವರೊಂದಿಗೆ ಸೇರಿಕೊಂಡು ಪ್ರವೇಶದ್ವಾರವನ್ನು ಉದ್ಘಾಟಿಸಿರುವುದು ಸೋಮಣ್ಣ ಅವರ ನಡೆ ಮೇಲೆ ಇನ್ನಷ್ಟು ಕುತೂಹಲ ಹೆಚ್ಚಿಸಿತ್ತು.

ಇದನ್ನೂ ಓದಿ: ಕೆಸಿ ನಾರಾಯಣ ಗೌಡ ಮತ್ತು ವಿ ಸೋಮಣ್ಣ ಈಗಾಗಲೇ ಹೇಳಿಕೆ ನೀಡಿದ್ದಾರೆ, ನಾನೇನೂ ಹೇಳಬೇಕಿಲ್ಲ: ನಳಿನ್ ಕುಮಾರ್ ಕಟೀಲ್

ಅದಾಗ್ಯೂ, ತಾನು ಕಾಂಗ್ರೆಸ್ ಸೇರುತ್ತಿಲ್ಲ, ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ನಾನು‌ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಿಲ್ಲ. ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಅಂತ ನಿಮ್ಮ ಬಳಿ ಬಂದು ಹೇಳಿದ್ದೇನಾ? ನಾನು ಕಾಂಗ್ರೆಸ್‌ಗೆ ಹೋಗುತ್ತೇನೆಂದು ಎಲ್ಲಾದರೂ ಹೇಳಿದ್ದೇನಾ? ಒಳ ಹಂತದಲ್ಲಿ ಕೆಲವೊಂದು ಚರ್ಚೆ ಆಗುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಒತ್ತು ನೀಡಬೇಡಿ ಎಂದು ಮನವಿ ಮಾಡಿದ್ದರು.

ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿದ್ದರೂ ಜಿಲ್ಲೆಯಲ್ಲಿ ನಡೆದಿದ್ದ ವಿಜಯ ಸಂಕಲ್ಪ ಯಾತ್ರೆಗೆ ಗೈರಾಗಿದ್ದರು. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಸೋಮಣ್ಣ ಗೈರು ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಈ ಬಗ್ಗೆಯೂ ಸ್ಪಷ್ಟನೆ ನೀಡಿದ್ದ ಸೋಮಣ್ಣ, ನನಗೆ ನನ್ನದೇ ಆದ ನಿಬಂಧನೆಗಳಿವೆ, ನನ್ನದೇ ಆದ ನಿರ್ಧಾರ, ಅನುಭವಗಳಿವೆ. ನಾನು ಹಳ್ಳಿಯಿಂದ ಬಂದವನು, ಸುಮಾರು 45 ವರ್ಷಗಳ ಕಾಲ ಮಣ್ಣು ಹೊತ್ತಿದ್ದೇನೆ. ಕೆಲಸವನ್ನ ದೇವರಾಗಿ ನೋಡಿದ್ದೇನೆ. ನನಗೆ ಯಾಕೆ ಅಷ್ಟು ಧೈರ್ಯ ಅಂದರೆ ಒಂದು‌‌ ಸಣ್ಣ ಅಪಚಾರ ಆಗಲು ಬಿಟ್ಟಿಲ್ಲ. ನಾನು‌ ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ಹೀಗಾಗಿ ನಮ್ಮ ಅನುಭವಕ್ಕೆ ತಕ್ಕಂತೆ ‌ನೋವು ಇರುತ್ತದೆ. ಇದನ್ನು ಹೇಳಿಕೊಳ್ಳಲು ಆಗುತ್ತದೆಯಾ? ಮನಸ್ಸು, ಆರೋಗ್ಯ ಎರಡು ಸರಿ‌ ಇಲ್ಲ ಕಾರಣ ನಾನು ಜಿಲ್ಲಾ ಉಸ್ತುವಾರಿಯಾಗಿರುವ ಚಾಮರಾಜನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಗೆ ಹೋಗಿರಲಿಲ್ಲ ಎಂದಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ