ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್: ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್

|

Updated on: Apr 18, 2023 | 2:23 PM

ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಲು ಕೋರ್ಟ್ ನಿರಾಕರಿಸಿದೆ. ಇದರಿಂದ ಚುನಾವಣೆ ಹೊತ್ತಲ್ಲೇ ವಿನಯ್ ಕುಲರ್ಣಿಗೆ ಸಂಕಷ್ಟ ಎದುರಾಗಿದೆ.​

ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್: ವಿನಯ್ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್
ವಿನಯ್ ಕುಲಕರ್ಣಿ
Follow us on

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡಕ್ಕೆ ಹೋಗಲು ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿದ್ದ ವಿನಯ್ ಕುಲಕರ್ಣಿ ಅರ್ಜಿಯನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ವಜಾಗೊಳಿಸಿದೆ. ಧಾರವಾಡದಲ್ಲಿ ಯೋಗೀಶ್ ಗೌಡ ಹತ್ಯೆ ಪ್ರಕರಣದ 90 ಸಾಕ್ಷಿಗಳಿದ್ದಾರೆ. ವಿನಯ್ ಕಲಕರ್ಣಿಗೆ​ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದರೆ ಪ್ರಕರಣಕ್ಕೆ ಸಮಸ್ಯೆಯಾಗಬಹುದು. ಸೂಚಕರ ಮೂಲಕವೇ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಕೋರ್ಟ್​  ಮುಂದೆ ಸಿಬಿಐ ಪರ ವಕೀಲ ವಾದ ಮಂಡಿಸಿದರು. ಇದನ್ನು ಆಲಿಸಿದ ನ್ಯಾಯಮೂರ್ತಿ ಬಿ. ಜಯಂತ ಕುಮಾರ್ ಕೋರ್ಟ್ , ವಿನಯ್ ಕುಲಕರ್ಣಿ ಮನವಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು. ಇದರಿಂದ ಮಾಜಿ ಸಚಿವ, ಧಾರವಾಡ ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್​ನಲ್ಲೂ ವಿನಯ್ ಕುಲಕರ್ಣಿಗೆ ಹಿನ್ನಡೆ; ಮೇಲ್ಮನವಿ ಅರ್ಜಿ ವಜಾ

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ(ಏಪ್ರಿಲ್ 17) ಅಂತ್ಯಗೊಂಡಿತ್ತು. ಅರ್ಜಿ ವಿಚಾರಣೆ ನಡೆಸುತ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಏಪ್ರಿಲ್‌ 18ಕ್ಕೆ ಆದೇಶ ಕಾಯ್ದಿರಿಸಿದೆ. ಚುನಾವಣೆ ಹಿನ್ನೆಲೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವೇಳೆ ಕುಲಕರ್ಣಿ ಪರ ವಕೀಲರಾದ ಸಿ ಹೆಚ್ ಹನುಮಂತರಾಯ, ಚುನಾವಣೆಗೆ ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸಬೇಕಿದೆ. ಹೀಗಾಗಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ವಾದ ಮಂಡಿಸಿದ್ದರು.

ನಿನ್ನೆ (ಏಪ್ರಿಲ್ 12) ನಡೆಸಿದ್ದ ವಿಚಾರಣೆ ವೇಳೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲರು, ಯೋಗೇಶ್ ಗೌಡ ಕೊಲೆ ಪ್ರಕರಣದ 90 ಸಾಕ್ಷಿಗಳು ಧಾರವಾಡ ಜಿಲ್ಲೆಯಲ್ಲೇ ಇದ್ದಾರೆ ಎಂಬುದನ್ನು ಹೇಳಿದ್ದರು. ಅಲ್ಲದೆ, ಸೂಚಕರ ಮೂಲಕವೇ ನಾಮಪತ್ರ ಸಲ್ಲಿಸುವ ಅವಕಾಶ ಇದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ವಾದ ಪ್ರತಿವಾದ ಆಲಿಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ (ಏಪ್ರಿಲ್ 18) ಕಾಯ್ದಿರಿಸಿತ್ತು. ಇದೀಗ ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ಇದರಿಂದ  ವಿನಯಕ್ ಕುಲಕರ್ಣಿ ಅವರು ಕ್ಷೇತ್ರದಿಂದ ಹೊರಗಿದ್ದುಕೊಂಡೇ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ವಿಶೇಷ ನ್ಯಾಯಾಲದ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

Published On - 1:48 pm, Tue, 18 April 23