ಕಾಂಗ್ರೆಸ್​ಗೆ ಭಾರಿ ದುಬಾರಿಯಾದ ಸತೀಶ್ ಜಾರಕಿಹೊಳಿ ನಡೆ: ಕೈ ಹೋರಾಟಗಳೆಲ್ಲ ನೀರಿನಲ್ಲಿ ಹೋಮ

ಸತೀಶ್ ಜಾರಕಿಹೊಳಿ ಅವರ ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕಾಂಗ್ರೆಸ್​ಗೆ ಮುಜುಗರ ತಂದಿಟ್ಟಿದೆ.

ಕಾಂಗ್ರೆಸ್​ಗೆ ಭಾರಿ ದುಬಾರಿಯಾದ ಸತೀಶ್ ಜಾರಕಿಹೊಳಿ ನಡೆ: ಕೈ ಹೋರಾಟಗಳೆಲ್ಲ ನೀರಿನಲ್ಲಿ ಹೋಮ
ಸತೀಶ್ ಜಾರಕಿಹೊಳಿ
Updated By: ರಮೇಶ್ ಬಿ. ಜವಳಗೇರಾ

Updated on: Nov 09, 2022 | 3:30 PM

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಹಿಂದೂ ಬಗ್ಗೆ ಸತೀಶ್ ಜಾರಕಿಹೊಳಿ (Satish Jarkiholi) ಹಿಂದೂ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ಕಾಂಗ್ರೆಸ್​ಗೆ ಮುಜುಗರ ತಂದಿಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಈ ಹೇಳಿಕೆಯಿಂದ ಕಾಂಗ್ರೆಸ್ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಎಐಸಿಸಿಯಿಂದಲೇ ಸತೀಶ್ ಜಾರಕಿಹೊಳಿಗೆ ಖಡಕ್ ವಾರ್ನಿಂಗ್ ಬಂದರೂ ಕ್ಯಾರೇ ಎನ್ನದೇ ತಮ್ಮ ಹೇಳಿಕೆ ಸಮರ್ಥಿಸಿಕೊಂಡು ಪಕ್ಷಕ್ಕೆ ಭಾರಿ ದುಬಾರಿಯಾಗಿದ್ದಾರೆ. ಪಕ್ಷದ ಸೂಚನೆ ಮೀರಿಯೂ ಕಾರ್ಯಾಧ್ಯಕ್ಷರಾಗಿ ಮತ್ತೆ ಸಮರ್ಥನೆ ಮಾಡಿಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ತೀವ್ರ ಅಸಮಾಧಾನಗೊಂಡಿದ್ದಾರೆ.

ಹಿಂದೂ ಪದದ ಯಥಾರ್ಥ ವಿಶ್ಲೇಷಣೆಗೆ ಸಮಿತಿ ರಚಿಸಲು ಕೋರಿ ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರ

ಕಾಂಗ್ರೆಸ್​ಗೆ ದುಬಾರಿಯಾದ ಸತೀಶ್ ಜಾರಕಿಹೊಳಿ

ಹೌದು…ಕಳೆದ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಕಂಡರೂ ಭೇಷ್ ಎನಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಅದ್ಯಾಕೋ ಏನೋ ಒಂದಲ್ಲ ಒಂದು ವಿಚಾರದಲ್ಲಿ ಕೆಲ ತಿಂಗಳಿಂದ ಸತೀಶ್ ನಡೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ದುಬಾರಿಯಾಗುತ್ತಿದೆ.

ಇತ್ತೀಚೆಗೆ ಪಕ್ಷದ ಪ್ರಮುಖ ಸಭೆಗಳಿಗೂ ಸತೀಶ್ ಜಾರಕಿಹೊಳಿ ಹಾಜರಾಗಿಲ್ಲ. ಎಸ್​​ಟಿ ಮೀಸಲು ಹೆಚ್ಚಳ ಸಂದರ್ಭದಲ್ಲೂ ಪಕ್ಷದ ನೆರವಿಗೆ ಬಂದಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರಾದರೂ ಪ್ರಮುಖ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೋಡೋ ಕಾರ್ಯಕ್ರಮದಲ್ಲೂ ನಾಮಕಾವಸ್ಥೆಗೆ ಸತೀಶ್ ಭಾಗಿಯಾಗಿ, ಕೇವಲ ಬೆಳಗಾವಿ ರಾಜಕಾರಣದ ಬಗ್ಗೆ ಗಮನಹರಿಸುತ್ತಿದ್ದಾರೆ. ಇದೀಗ ಹಿಂದೂ ಧರ್ಮದ ಹೇಳಿಕೆಯನ್ನು ಸಮರ್ಥನೆಯಿಂದ ಕಾಂಗ್ರೆಸ್​​ಗೆ ಮತ್ತಷ್ಟು ಮುಜುಗರ ಉಂಟು ಮಾಡುವ ಮೂಲಕ ಪಕ್ಷಕ್ಕೆ ದುಬಾರಿಯಾಗಿದ್ದಾರೆ.

ಸತೀಶ್​ ಜಾರಕಿಹೊಳಿ ಹಿಂದೂ ಹೇಳಿಕೆ ವಿರುದ್ಧ ಬದ್ಧತೆಯಿದ್ದರೆ ಕಾಂಗ್ರೆಸ್ ಕ್ರಮಕೈಗೊಳ್ಳಬೇಕು: ಸಿಎಂ ಬೊಮ್ಮಾಯಿ

ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ

ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಇದುವರೆಗೆ ಕಾಂಗ್ರೆಸ್​, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಡಿಕೊಂಡು ಬಂದ ಹೋರಾಟಗಳು ವ್ಯರ್ಥವಾದಂತಾಗಿದೆ. ಇದುವರೆಗೆ ಪೇ ಸಿಎಂ, ಸೇ ಸಿಎಂ ಸೇರಿದಂತೆ ಹಲವು ಅಭಿಯಾನಗಳನ್ನು ಮಾಡಿಕೊಂಡು ಬಂದಿದ್ದ ಕಾಂಗ್ರೆಸ್​ಗೆ ಸತೀಶ್ ಹೇಳಿಕೆಯಿಂದ ಕೋಲು ಕೊಟ್ಟು ಹೊಡೆಸಿಕೊಂಡಂತಾಗಿದೆ.

ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಕಾಂಗ್ರೆಸ್ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದರೂ ಬಿಜೆಪಿಗೆ ಮಾತ್ರ ಬ್ರಹ್ಮಾಸ್ತ್ರವಾಗಿದೆ. ಜಾರಕಿಹೊಳಿ ಅವರ ಹಿಂದೂ ಧರ್ಮದ ಹೇಳಿಕೆಯನ್ನು ಚುನಾವಣೆ ಅಸ್ತ್ರವನ್ನಾಗಿಸಿಕೊಂಡು ಜನರ ಉಂದೆ ಹೋಗಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಧರ್ಮ ಮತ್ತು ಭಾವನಾತ್ಮಕ ವಿಚಾರವನ್ನು ಬಳಸಿಕೊಂಡು ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು ಎಂಬುದು ಗೊತ್ತಿರುವ ವಿಚಾರವೇ.

ಈಗ ಸತೀಶ್ ಜಾರಕಿಹೊಳಿ ಅವರ ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಜತೆಗೆ ಇದನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಈಗಾಗಲೇ ಪ್ರತಿಭಟನೆಗಳು, ಅಭಿಯಾನಗಳು ಶುರುಮಾಡಿಕೊಂಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ