ಬೆಂಗಳೂರು, (ಡಿಸೆಂಬರ್ 02): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ(Congress government )ಬಂದು ಆರು ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿದೆ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಂತಿಮವಾಗಿ ಆರ್ ಅಶೋಕ್ ಅವರನ್ನು ರಾಜ್ಯದ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಜಂಟಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿವೆ. ಈ ಬಗ್ಗೆ ನಿನ್ನೆ(ಡಿಸೆಂಬರ್ 01) ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಶುಕ್ರವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನಿವಾಸದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಉಭಯ ಪಕ್ಷಗಳ ಇತರೆ ನಾಯಕರು ಭಾಗವಹಿಸಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಯಾವೆಲ್ಲಾ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕು ಮತ್ತು ಹೋರಾಟದ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊನೆಗೂ ನಿಗಮ ಮಂಡಳಿ ನೇಮಕಕ್ಕೆ ಸಿಗಲಿದೆ ಮುಕ್ತಿ: ಶನಿವಾರ ಸಂಜೆಯೊಳಗೆ ಪಟ್ಟಿ ಪ್ರಕಟ
ಈ ಮೂಲಕ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ, ಬರ ನಿರ್ವಹಣೆಯಲ್ಲಿ ವಿಫಲವಾಗಿರುವುದು, ಗುತ್ತಿಗೆದಾರರಿಂದ ಕಮೀಷನ್ ಪಡೆಯುತ್ತಿರುವ ಆರೋಪ, ಗುತ್ತಿಗೆದಾರರ ಆತ್ಮಹತ್ಯೆ- ಸಾವು ಪ್ರಕರಣಗಳು, ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿರುವುದು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರ ವಿರುದ್ಧ ಸದನದಲ್ಲಿ ಹೋರಾಟ ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿದು ಗೌರವ ಕೊಡುವಂತೆ ಮಾಡಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಕುರಿತು ಸದನದಲ್ಲಿ ಪ್ರಸ್ತಾಪಿಸಿ ಕ್ಷಮೆಯಾಚನೆಗೆ ಪಟ್ಟುಹಿಡಿಯುವ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಅದಕ್ಕಾಗಿ ಒಟ್ಟಾಗಿ ಹೋರಾಟ ಮಾಡಬೇಕು. ವಿಷಯಗಳ ಮೇಲಿನ ಚರ್ಚೆಯ ವೇಳೆ ಪರಸ್ಪರ ಸಹಕಾರ ಕೊಟ್ಟು ಸರ್ಕಾರದ ವಿರುದ್ಧ ನಿಲ್ಲಬೇಕು ಎನ್ನುವ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ