ಬೆಂಗಳೂರು: ಇಂದು ರಾಜ್ಯಸಭಾ (Rajya Sabha Election) 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 4 ಸ್ಥಾನಗಳಿಗೆ ಮೂರು ಪಕ್ಷದ ಒಟ್ಟು 6 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಶಾಸಕರು ಬಂದು ಮತದಾನ ಮಾಡುತ್ತಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ (HD Revanna) ಮತದಾನ ಮಾಡಿ ತಮ್ಮ ಮತವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ರೇವಣ್ಣರವರ ಮತವನ್ನು ಅಸಿಂಧು ಮಾಡುವಂತೆ ಬಿಜೆಪಿ, ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ, ನಾನು ಮತ ಹಾಕಿದ್ದನ್ನು ಯಾರಿಗೂ ತೋರಿಸಿಲ್ಲ. ನಾನು ಮತ ಹಾಕುವುದನ್ನ ಡಿಕೆಶಿಗೆ ಯಾಕೆ ತೋರಿಸಲಿ? ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಕುಮಾರಸ್ವಾಮಿ ಹೇಳಿದ್ದೇನು?
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ 2 ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೀಗೆ ಮಾಡುತ್ತಿವೆ. ಸೋಲುವ ಭೀತಿಯಿಂದ ಈ ರೀತಿಯಾಗಿ ಮಾಡುತ್ತಿವೆ. ಅಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಅಸಿಂಧು ಆಗುವ ಸಾಧ್ಯತೆ:
ಮತವನ್ನು ಯಾರಿಗೂ ತೋರಿಸುವಂತಿಲ್ಲ. ಹಾಗೇನಾದರೂ ಬೇರೆಯವರ ಮುಂದೆ ಪ್ರದರ್ಶಿಸಿದರೆ ಆ ಮತವನ್ನು ಅಸಿಂಧು ಎಂದು ಘೋಷಿಸಲಾಗುತ್ತದೆ. ಅದೇ ರೀತಿ ಹೆಚ್ಡಿ ರೇವಣ್ಣ ತಮ್ಮ ಮತವನ್ನು ಡಿಕೆ ಶಿವಕುಮಾರ್ ಮುಂದೆ ಪ್ರದರ್ಶಿಸಿದರೆ ಮತ ಅಸಿಂಧು ಆಗುತ್ತದೆ.
ಶ್ರೀನಿವಾಸ್ ವಿರುದ್ಧ ರೇವಣ್ಣ ಗರಂ:
ಅಡ್ಡ ಮತದಾನ ಮಾಡಿರುವ ಹಿನ್ನೆಲೆ ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ನಾನು ಕ್ರಾಸ್ ವೋಟ್ ಮಾಡಿಲ್ಲ. ಜೆಡಿಎಸ್ಗೆ ಮತ ಹಾಕಿದ್ದೇನೆ ಎಂದು ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
ಮತ ಎಣಿಕೆ ವಿಳಂಬ ಸಾಧ್ಯತೆ:
ಚುನಾವಣಾ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಯಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಿಗದಿಯಾಗಿತ್ತು. ಕನಿಷ್ಠ ಎರಡು ಗಂಟೆ ಕಾಲ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಯಿದೆ. ರೇವಣ್ಣ ಮತ ವಿಚಾರಕ್ಕೆ ಸಂಬಂಧಿಸಿ ಆಯೋಗ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ವಿಳಂಬವಾಗಬಹುದು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 10 June 22