ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಚುರುಕುಗೊಳಿಸಿದೆ. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರನ್ನು ಮೂರು ತಿಂಗಳ ಅವಧಿಗೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಒಬ್ಬರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಬ್ಬರನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಇಬ್ಬರು ನಟರ ಜೊತೆಗೆ ಮಾತುಕತೆ ನಡೆಸಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಒಪ್ಪಿಸುವ ಜವಾಬ್ದಾರಿಯನ್ನು ಹಿರಿಯ ಸಚಿವರಿಗೆ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬೂತ್ ಕಮಿಟಿ ಸಕ್ರಿಯಗೊಳಿಸಿದ ಬಿಜೆಪಿ
ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಚುರುಕುಗೊಳಿಸಿದೆ. ಈ ಸಂಬಂಧ ಉಡುಪಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಚುನಾವಣೆ ದೃಷ್ಟಿಕೋನದಿಂದ ಪೂರ್ಣ ತಯಾರಿ ಮಾಡಿದ್ದೇವೆ. ವಿಸ್ತಾರಕ್, ಪೇಜ್ ಕಮಿಟಿ ಮತ್ತು ಬೂತ್ ಕಮಿಟಿಗಳನ್ನು ಸಕ್ರಿಯಗೊಳಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಇದಕ್ಕೆ ಬೇಕಾದ ಕಾರ್ಯ ಯೋಜನೆ ರೂಪಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಬಿಜೆಪಿ ಸೇರಲಿದ್ದಾರೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆ. ಅವರು ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಪಕ್ಷ ಸೇರುತ್ತಾರೆ ಎಂದು ಹೇಳಿದರು.
ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಘೋಷಿಸುವುದರ ವಿರುದ್ಧ ಶ್ರೀರಾಮಸೇನೆ ನಡೆಸುತ್ತಿರುವ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಝಾನ್ ಕುರಿತು ನ್ಯಾಯಾಲಯದ ತೀರ್ಪಿನಂತೆ ಕ್ರಮಕೈಗೊಳ್ಳಲಾಗುತ್ತದೆ. ಸರ್ಕಾರ, ಸಾಂವಿಧಾನಿಕ ಜವಾಬ್ದಾರಿ ಬೇರೆ, ಹೋರಾಟಗಾರರ ಮನೋಭಾವವೇ ಬೇರೆ. ಸಂಘಟನಾತ್ಮಕವಾಗಿ ನಾವು ಹೇಳಿದ ಎಲ್ಲವನ್ನೂ ಸರ್ಕಾರ ಮಾಡಲು ಆಗುವುದಿಲ್ಲ. ಪ್ರಮೋದ್ ಮುತಾಲಿಕ್ ಅವರು ತೀರಾ ಸಹಜವಾದ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಸಂವಿಧಾನದಡಿಯಲ್ಲಿ ಮುತಾಲಿಕರ ಯಾವ ಅಪೇಕ್ಷೆ ಪೂರೈಸಲು ಸಾಧ್ಯವೋ ಅದನ್ನು ಪೂರೈಸುತ್ತೇವೆ. ಸಂವಿಧಾನಾತ್ಮಕವಾಗಿ ಇರುವ ಕಾನೂನಿನ ಅಡೆತಡೆಗಳನ್ನು ಗಮನಿಸಿ ಸರ್ಕಾರವು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಬಸನಗೌಡ ಯತ್ನಾಳ್ ನೀಡುತ್ತಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯದ ಶಿಸ್ತು ಸಮಿತಿ ಇದೆ. ಕೇಂದ್ರ ಶಿಸ್ತು ಸಮಿತಿಗೆ ಇಲ್ಲಿನ ಬೆಳವಣಿಗೆಗಳನ್ನು ತಿಳಿಸಿದ್ದೇವೆ. ಅವರು ಯೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಯತ್ನಾಳ್ ಮರುದಿನವೇ ತನ್ನ ಹೇಳಿಕೆ ಬದಲಾಯಿಸಿದ್ದಾರೆ. ತನ್ನ ಹೇಳಿಕೆಯ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.
ದೇಶದ್ರೋಹ ಕಾನೂನು ಮರುಪರಿಶೀಲನೆ ಕುರಿತು ಸುಪ್ರೀಂಕೋರ್ಟ್ ಈಗಾಗಲೇ ನಿರ್ದೇಶನ ಕೊಟ್ಟಿದೆ. ಕೆಲ ಬೆಳವಣಿಗೆಗಳ ಕುರಿತು ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ನೆಲದಲ್ಲಿ ಹುಟ್ಟಿ, ಈ ಮಣ್ಣಿನಲ್ಲಿ ಬೆಳೆದು, ದೇಶದ ಕಾನೂನಿಗೆ ಗೌರವ ಕೊಡಬೇಕು. ಈ ದೇಶವಾಸಿಗಳು ರಾಷ್ಟ್ರವನ್ನು ಪ್ರೀತಿಸಬೇಕು ಎಂದು ತಿಳಿಸಿದರು.
ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದಾಗ ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆಗಳು ಹೆಚ್ಚಾಗುತ್ತವೆ. ಕಡಿಮೆಯಾದಾಗ ಇಳಿಕೆಯಾಗುತ್ತದೆ. ಬಡವರಿಗೆ ಉಚಿತ ಗ್ಯಾಸ್ ಕೊಟ್ಟದ್ದು ಬಿಜೆಪಿ. ಅರ್ಜಿ ಹಾಕದ ಬಡವರ ಮನೆಗಳಿಗೂ ಗ್ಯಾಸ್ ತಲುಪಿಸಿದ್ದೇವೆ. ಅರ್ಜಿ ತೆಗೆದುಕೊಳ್ಳದೆ ಅವರ ಖಾತೆಗಳಿಗೆ ₹ 500 ಹಾಕಿಸಿದ್ದೇವೆ. ರೈತರ ಅಕೌಂಟ್ಗಳಿಗೆ ಹತ್ತು ಸಾವಿರ ರೂಪಾಯಿ ಹಾಕಿದ್ದು ಬಿಜೆಪಿ. ದೇಶದಲ್ಲಿ ಮುಂದಿನ ಮೂವತ್ತು ವರ್ಷಗಳ ಕಾಲ ಬೇರೆ ಯಾವುದೇ ಸರ್ಕಾರ ಬರುವುದಿಲ್ಲ ಎಂದರು.
ಇದನ್ನೂ ಓದಿ: ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಜುಲೈ 6 ರವರೆಗೆ ಬಂಧಿಸುವಂತಿಲ್ಲ: ಪಂಜಾಬ್ ಹೈಕೋರ್ಟ್
ಇದನ್ನೂ ಓದಿ: ಚುನಾವಣೆ ಹೊಸಿಲಲ್ಲಿರುವ ಹಿಮಾಚಲ ಪ್ರದೇಶದ ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ರಾಹುಲ್ ದ್ರಾವಿಡ್
Published On - 2:02 pm, Tue, 10 May 22