ಬೆಂಗಳೂರು, ಸೆಪ್ಟೆಂಬರ್ 01: ರಾಜ್ಯ ಕಾಂಗ್ರೆಸ್ ಸರ್ಕಾರ ಭರ್ತಿ ನೂರು ದಿನ ಪೂರೈಸಿದೆ. ಗ್ಯಾರಂಟಿಗಳನ್ನೂ ಜಾರಿಗೊಳಿಸಿ ವಿಪಕ್ಷಗಳ ಟೀಕೆಗೆ ತಿರುಗೇಟು ಕೊಡುವ ಕೆಲಸ ಮಾಡುತ್ತಿದೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಇದುವರೆಗೂ ಬಿಜೆಪಿ (BJP) ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಬಿಜೆಪಿಯನ್ನು ಕಾಂಗ್ರೆಸ್ ಲೇವಡಿ ಮಾಡುತ್ತಿದೆ. ಇದರಿಂದ ಸೋತು ಸುಣ್ಣವಾಗಿರುವ ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದೆ. ಯಾರನ್ನ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಹೇಗೆ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಲೇ ಇವೆ. ಆದ್ರೆ, ಇದರ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆಗಾಗಿ (Lok Sabha Election) ಹೈಕಮಾಂಡ್ ರಾಜ್ಯ ನಾಯಕರನ್ನು ಬಡಿದೆಬ್ಬಿಸಿದ್ದು, ಶುಕ್ರವಾರ ನಡೆದ, ಲೋಕಸಭಾ ಚುನಾವಣಾ ಸಿದ್ಧತೆ ಸಭೆಯಲ್ಲಿ ಶಾಸಕರು ಹಾಗೂ ಮಾಜಿ ಶಾಸಕರುಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೊಸ ಟಾಸ್ಕ್ ಕೊಟ್ಟಿದ್ದಾರೆ.
ಇನ್ಮುಂದೆ ಬೂತ್ ಸಮಿತಿ ಜವಾಬ್ದಾರಿಯನ್ನು ಶಾಸಕರು ಕೂಡ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಲ್ ಸಂತೋಷ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿನ್ನೆ (ಆಗಸ್ಟ್ 31) ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆಯಲ್ಲಿ ಸಂತೋಷ್ ಅವರು ತಮ್ಮ ಶಾಸಕರಿಗೆ ಲೋಕಸಭಾ ಚುನಾವಣೆ ಸಂಬಂಧ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಬೂತ್ ಸಮಿತಿ ಜವಾಬ್ದಾರಿ ಮಂಡಲ ಅಧ್ಯಕ್ಷರು ಮಾತ್ರ ವಹಿಸಿದರೆ ಆಗಲ್ಲ. ಶಾಸಕರು ಕೂಡ ಬೂತ್ ಸಮಿತಿಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಸಭೆ ಮಾಡುವುದಲ್ಲ. ಶಾಸಕರು ಕೇವಲ ಚುನಾವಣೆ ಅಂತಾ ಓಡಾಡಿದರೆ ಹೇಗೆ ಎಂದು ಪ್ರಶ್ನಿಸಿರುವ ಬಿಎಲ್ ಸಂತೋಷ್, ಯಾರ್ಯಾರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ, ಸ್ಪರ್ಧಿಸಬೇಕು ಎನ್ನುವವರು ಬೂತ್ ಸಮಿತಿ ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಬಿಎಲ್ ಸಂತೋಷ್ ಹೇಳಿಕೆ; ಯಾರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ ವಿವರ
ಶಾಸಕರಿಗೆ ಬೂತ್ ಚಟುವಟಿಕೆ ಗೊತ್ತಿಲ್ಲ ಅಂತಾದರೆ, ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಶಾಸಕರು ಏನು ಸಂಘಟನೆ ಮಾಡಿದಂತಾಗುತ್ತದೆ? ಮಂಡಲ ಅಧ್ಯಕ್ಷರು ಬೂತ್ ಜವಾಬ್ದಾರಿ ವಹಿಸುಕೊಳ್ಳುವುದು, ಶಾಸಕರು ಚುನಾವಣೆಗೆ ಸ್ಫರ್ಧೆ ಮಾತ್ರ ಮಾಡುವುದಾದರೆ ಹೇಗೆ? ಎಂದು ಶಾಸಕರು ಹಾಗೂ ಮಾಜಿ ಶಾಸಕರುಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಬಿಎಲ್ ಸಂತೋಷ್, ಶಾಸಕರು, ಪರಾಜಿತ ಅಭ್ಯರ್ಥಿಗಳು ಕೂಡಾ ಪಕ್ಷ ಸಂಘಟನೆ ಮಾಡಲೇಬೇಕು. ಇನ್ನು ಮುಂದೆ ಮಂಡಲ ಅಧ್ಯಕ್ಷರ ಜೊತೆ ಶಾಸಕರೂ ಬೂತ್ ಜವಾಬ್ದಾರಿ ಹೊರಲೇಬೇಕು ಎಂದು ಟಾಸ್ಕ್ ಕೊಟ್ಟಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ