ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಬಿಎಲ್ ಸಂತೋಷ್ ಹೇಳಿಕೆ; ಯಾರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ ವಿವರ

Karnataka Politics; ಬಿಎಲ್ ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕಾಂಗ್ರೆಸ್​ನ 40 ಜನ ಅಲ್ಲ, 136 ಶಾಸಕರನ್ನೂ ಅವರು ಸಂಪರ್ಕದಲ್ಲಿ ಇಟ್ಟುಕೊಳ್ಳಲಿ. ನಮ್ಮ ಎಲ್ಲ ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಬಹಳ ಸಂತೋಷ ಎಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಬಿಎಲ್ ಸಂತೋಷ್ ಹೇಳಿಕೆ; ಯಾರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ ವಿವರ
ಡಿಕೆ ಶಿವಕುಮಾರ್ & ಬಿಎಲ್ ಸಂತೋಷ್
Follow us
| Updated By: ಗಣಪತಿ ಶರ್ಮ

Updated on: Sep 01, 2023 | 3:17 PM

ಬೆಂಗಳೂರು, ಸೆಪ್ಟೆಂಬರ್ 1: ಕಾಂಗ್ರೆಸ್​ನ 40-45 ಶಾಸಕರು ಸಂಪರ್ಕದಲ್ಲಿದ್ದಾರೆ, ಹೈಕಮಾಂಡ್ ಅನುಮತಿ ಕೊಟ್ಟರೆ ಒಂದು ದಿನದ ಕೆಲಸ. ಆದರೆ ಈಗ ಅದರ ಅಗತ್ಯವಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಬಿಎಲ್ ಸಂತೋಷ್ (BL Santhosh) ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ತೀವ್ರ ಸಂಚಲನ ಸೃಷ್ಟಿಸಿದೆ. ಸಂತೋಷ್ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಚಿವ ಎಂಬಿ ಪಾಟೀಲ್, ರಾಮಲಿಂಗಾ ರೆಡ್ಡಿ ಮತ್ತಿತರರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಟಾಂಗ್ ಕೊಟ್ಟಿದ್ದಾರೆ. 40 ಮಂದಿ ಅಲ್ಲ, 136 ಶಾಸಕರ ಜತೆಗೂ ಸಂಪರ್ಕ ಇಟ್ಟುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಕುಹಕವಾಡಿದ್ದಾರೆ.

ಸಂತೋಷ್ ಹೇಳಿಕೆಗೆ ಏನಂದ್ರು ಡಿಕೆ ಶಿವಕುಮಾರ್?

ಕಾಂಗ್ರೆಸ್​ನ 40 ಜನ ಅಲ್ಲ, 136 ಶಾಸಕರನ್ನೂ ಅವರು ಸಂಪರ್ಕದಲ್ಲಿ ಇಟ್ಟುಕೊಳ್ಳಲಿ. ನಮ್ಮ ಎಲ್ಲ ಶಾಸಕರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಲಿ, ಬಹಳ ಸಂತೋಷ ಎಂದು ಚಿಕ್ಕಬಳ್ಳಾಪುರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಅವರ ಸಭೆಯಲ್ಲಿ ಯಾರು ಗೈರಾಗಿದ್ರು; ಎಂಬಿ ಪಾಟೀಲ್ ಪ್ರಶ್ನೆ

ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಎಲ್ ಸಂತೋಷ್ ಗಮನ ಹರಿಸಲಿ. ಅವರ ಶಾಸಕರೇ ನಮ್ಮ ಜೊತೆಗೆ ಬರುತ್ತಾ ಇದ್ದಾರೆ. ಕರ್ನಾಟಕ ಬಿಜೆಪಿ ಮುಳುಗಿರುವ ಹಡಗು, ಅಲ್ಲ, ಮುಳುಗಿ ಹೋದ ಹಡಗು ಅದು. ಸೀ ಡೈವರ್ಸ್ ತರಹ ಸಂತೋಷ್ ಮುಳುಗಿ ಅದನ್ನು ಮೇಲೆತ್ತಲಿ. ಯಾಕೆ ಅವರ ಪಕ್ಷದ ಶಾಸಕರೆಲ್ಲ ನಮ್ಮ ಕಡೆಗೆ ಬರ್ತಿದ್ದಾರೆ? ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಕೂಡ ನಿನ್ನೆ ಸಭೆಗೆ ಗೈರಾಗಿದ್ದರು. ಅವರ ಪಕ್ಷ ಬಿಡುತ್ತಿರುವ ಶಾಸಕರ ಮೇಲೆ ಒತ್ತಡ ಹಾಕಲು ಸಂತೋಷ್ ಹೇಳ್ತಿದ್ದಾರೆ. ಅವರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಹೇಳಿಕೆ ಕೊಡ್ತಿದ್ದಾರೆ. ಮುಂದೆ ಬಿಎಲ್ ಸಂತೋಷ್ ಸಭೆ ಮಾಡುವುದಕ್ಕೆ ಯಾರೂ ಜನ ಉಳಿಯುವುದಿಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಟಾಂಗ್

ಬಿಜೆಪಿ ಸಂಪರ್ಕದಲ್ಲಿ ಶಾಸಕರು ಅಲ್ಲಾ ನಗರಸಭೆ ಸದಸ್ಯರು ಕೂಡ ಇಲ್ಲ. ನಮಗೆ ಅನ್ಯ ಪಕ್ಷದ ಶಾಸಕರ ಅವಶ್ಯಕತೆಯಿಲ್ಲ. ಆದ್ರೆ ಆಶೆ ಆಮಿಷ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಯಾರ ಬೇಕಾದ್ರು ಸೇರಬಹುದು. ಬಿಜೆಪಿಯಲ್ಲಿ ಆರ್​​ಎಸ್ಎಸ್ ಮೂಲದವರಿಗೆ ಮಾತ್ರ ಬೆಲೆಯಿದೆ. ಬಿಜೆಪಿಯಲ್ಲಿ ನಿಷ್ಠಾವಂತ ಮುಖಂಡರಿಗೆ ಬೆಲೆಯಿಲ್ಲ. ಬಿಎಸ್ ಯಡಿಯೂರಪ್ಪ ಅವರನ್ನು ಏನು ಮಾಡಿದರು ಎಂಬುದು ಗೊತ್ತಿದೆಯಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಚಿಕ್ಕಬಳ್ಳಾಪುರದಲ್ಲಿ ಟಾಂಗ್ ನೀಡಿದರು.

ಇದನ್ನೂ ಓದಿ: 40 – 45 ಜನ ಸಂಪರ್ಕದಲ್ಲಿದ್ದಾರೆ, ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ, ಆದರೆ; ಬಿಎಲ್​ ಸಂತೋಷ್ ಸ್ಫೋಟಕ ಹೇಳಿಕೆ

ಆಡಳಿತ ಪಕ್ಷದ ಶಾಸಕರಲ್ಲಿದೆ ಅಸಮಾಧಾನ; ಯತ್ನಾಳ್

ಬಿಎಲ್ ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ನಾನು ಮೊದಲೇ ಹೇಳಿಕೊಂಡು ಬಂದಿದ್ದೇನೆ, ಏನೋ ಗಡಿಬಿಡಿ ಇದೆ ಎಂದು. ಕಾಂಗ್ರೆಸ್​​ನಿಂದ ಆಡಳಿತ ಪಕ್ಷದ ಬಹಳಷ್ಟು ಶಾಸಕರು ಅಸಮಾಧಾನ ಆಗಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರಿಗೆ ಮಂತ್ರಿಗಳು ಬೆಲೆ ಕೊಡುತ್ತಿಲ್ಲಾ, ಅಭಿವೃದ್ಧಿಗೆ ಹಣ ಇಲ್ಲಾ. ಇವರ ಗ್ಯಾರೆಂಟಿಗಳಿಗೆ 52 ಸಾವಿರ ಕೋಟಿ ರೂಪಾಯಿ ಬೇಕು. ಅದನ್ನು ಭರ್ತಿ ಮಾಡಲು ಇವರು ಬೇರೆ ಬೇರೆ ತರಹದ ಟ್ಯಾಕ್ಸ್ ಹಾಕುತ್ತಿದ್ದಾರೆ. ಮತ್ತೆ ವಿದ್ಯುತ್ ದರ ಒಂದು ರೂಪಾಯಿ ಏರಿಸಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಇಲ್ಲಾ ಎನ್ನುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗುತ್ತಿಗೆದಾರರ ಬಿಲ್ ಬಿಡುಗಡೆಯಾಗಿಲ್ಲ. ಇನ್ನು ಕೆಲ ಹಿರಿಯ ಶಾಸಕರಿಗೆ ಮಂತ್ರಿ ಮಾಡಿಲ್ಲ ಎಂಬ ಅಸಮಾಧಾನ ಕೂಡ ಇದೆ ಎಂದ ಯತ್ನಾಳ್, ಬಿಜೆಪಿ ಶಾಸಕರಿಗೆ ದುಡುಕಿನ‌ ನಿರ್ಣಯ ತೆಗೆದುಕೊಳ್ಳಬೇಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ