ಈಶ್ವರಪ್ಪ ಸೇರಿ ಕರ್ನಾಟಕದ ಮೂವರು ನಾಯಕರಿಗೆ ಬಿಜೆಪಿ ಹೈಕಮಾಂಡ್ ಬುಲಾವ್: ಕಾರಣ ಏನು?

| Updated By: Ganapathi Sharma

Updated on: Nov 01, 2023 | 7:52 PM

ಗುರುವಾರ ಮಧ್ಯಾಹ್ನ 3.30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು.

ಈಶ್ವರಪ್ಪ ಸೇರಿ ಕರ್ನಾಟಕದ ಮೂವರು ನಾಯಕರಿಗೆ ಬಿಜೆಪಿ ಹೈಕಮಾಂಡ್ ಬುಲಾವ್: ಕಾರಣ ಏನು?
ಕೆಎಸ್ ಈಶ್ವರಪ್ಪ, ಸಂಸದ ಪಿಸಿ ಮೋಹನ್‌ ಹಾಗೂ ಕೋಟ ಶ್ರೀನಿವಾಸ ಪೂಜಾರಿ
Follow us on

ಬೆಂಗಳೂರು, ನವೆಂಬರ್ 1: ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕನ ನೇಮಕವಾಗಿಲ್ಲದಿರುವುದು ಮತ್ತು ರಾಜ್ಯ ಬಿಜೆಪಿ (BJP) ನಾಯಕರನ್ನು ದೆಹಲಿ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೇ ಇದೀಗ ಮೂವರು ನಾಯಕರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ (BJP High Command) ಸೂಚನೆ ನೀಡಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa), ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಗುರುವಾರವೇ ದೆಹಲಿಗೆ ತೆರಳಬೇಕಿದೆ.

ಗುರುವಾರ ಮಧ್ಯಾಹ್ನ 3.30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವುದಕ್ಕಾಗಿ ಸದಾನಂದ ಗೌಡರು ದೆಹಲಿಗೆ ತೆರಳಿದ್ದರು.

ಈ ಮಧ್ಯೆ, ಹೈಕಮಾಂಡ್​​ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಆಯ್ಕೆ ಮಾಡದ ವಿಚಾರವಾಗಿ ಹೈಕಮಾಂಡ್​​ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅಲ್ಲಿ ನಮಗಿಂತ ತಿಳಿದವರು, ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಯಾಕೆ ತಡ ಮಾಡಿದ್ದಾರೆ ಎಂಬುದಕ್ಕೆ ಒಂದು ಕಾರಣ ಇರಬಹುದು. ಆ ಕಾರಣ ಏನು ಎಂದು ತಿಳಿಯುವ ಅಗತ್ಯ ನನಗಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಶಾಸಕರು ದುಬೈಗೆ ಓಡಿ ಹೋಗುವುದು ತಡೆಯಲು ಸಭೆ: ಕಾಂಗ್ರೆಸ್​ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ನೇಮಕಾತಿ ಬಗ್ಗೆ ಸದಾನಂದ ಗೌಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಗೌಡರು ಹೇಳಿದ್ದು ಅಲ್ಲಿಗೆ ಮುಗಿದಿದೆ. ಸಮಸ್ಯೆ ಅಲ್ಲಿಗೆ ಪರಿಹಾರ ಆಗಿದೆ. ಅವರು ಅದನ್ನು ಮುಂದುವರಿಸಿಲ್ಲ.
ಮುಂದುವರಿಸಿರುತ್ತಿದ್ದರೆ ಏನು ಮಾಡಬೇಕು ಅಂತಾ ಹೇಳುತ್ತಿದ್ದೆ ಎಂದರು.

ಕಾಂಗ್ರೆಸ್‌ನ ಯಾವ ಆಂತರಿಕ ಸಂಘರ್ಷವೂ ಬಗೆಹರಿದಿಲ್ಲ: ಈಶ್ವರಪ್ಪ

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್‌ನ ಯಾವ ಆಂತರಿಕ ಸಂಘರ್ಷವೂ ಬಗೆಹರಿದಿಲ್ಲ. ಮಾಸಿಕ ಕಲೆಕ್ಷನ್ ಕೊಟ್ಟಿಲ್ಲವೆಂದು ಕರ್ನಾಟಕಕ್ಕೆ ಬಂದಿದ್ದಾರೆ. ಸಮಸ್ಯೆ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಂದಿಲ್ಲ. ಪಂಚರಾಜ್ಯಗಳ ಚುನಾವಣೆ ಇದೆ, ಹಣ ಕೊಡುತ್ತೇವೆ ಅಂತಾ ಕೊಟ್ಟಿಲ್ಲ. ಹಣ ಕೊಡ್ರಪ್ಪಾ ಅಂತಾ ಕೇಳಲು ರಾಜ್ಯಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು. ಶಾಸಕರಿಗೆ 50 ಕೋಟಿ ಕೊಡಲು ನಮಗೇನು ಗ್ರಹಚಾರ ಕೆಟ್ಟಿದೆಯಾ? ಸರ್ಕಾರ 6 ತಿಂಗಳು ಇರಬಹುದೆಂದು ಹೇಳಿದರೆ ಶಾಸಕರು ಬೈಯ್ಯಬಹುದು. ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾನೆಂದು 6 ತಿಂಗಳ ಹಿಂದೆಯೇ ಹೇಳಿದ್ದೆ. ಅಲ್ಲಿ ಒಬ್ಬನೇ ಅಜಿತ್ ಪವಾರ್ ಇದ್ದ, ಇಲ್ಲಿ ಸಾಕಷ್ಟು ನಾಯಕರಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ನೋಡೋಣ. ಕಾಂಗ್ರೆಸ್‌ ಸರ್ಕಾರ ಬೀಳಿಸಲು ನಾವು ಯಾವುದೇ ಶ್ರಮ ಹಾಕುತ್ತಿಲ್ಲ. ಹಿಂದೆಯೂ ನಾವು ಶ್ರಮ ಹಾಕಿರಲಿಲ್ಲ. ಯಾರೋ ಕಾರ್ಯಕರ್ತರನ್ನು ಹಿಡಿದು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ. ಬಿಜೆಪಿಯ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಂಡು ಹೋಗಲು ಆಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸೋತವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾಳೆ ಮತ್ತೆ ಬಿಜೆಪಿಗೆ ಬರಬಹುದು, ನಾನು ಏಕೆ ಅವರನ್ನು ಬೈಯಲಿ ಎಂದು ಈಶ್ವರಪ್ಪ ಹೇಳಿದರು.

ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Wed, 1 November 23