ಡಿಕೆ ಶಿವಕುಮಾರ್ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್: ಬಿಎಸ್ ಯಡಿಯೂರಪ್ಪ
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ನಾಯಕತ್ವ ಜಗ್ಗಾಟ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರಿಕೆ ಆಗಿದೆ. ಉಪಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ. ಐಟಿ ದಾಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಇದು ಲೂಟಿ ಸರ್ಕಾರ ಎಂಬುವುದು ಸಾಬೀತಾಗಿದೆ ಎಂದು ಬಿಎಸ್ ಯಡಿಯೂರಪ್ಪ ವಾಗ್ದಾಳಿ ಮಾಡಿದರು.
ಬೆಂಗಳೂರು ನ.02: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಹೊರಗಿಟ್ಟು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೆನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೆಲವು ಶಾಸಕರು ಡಿನ್ನರ್ ಮೀಟಿಂಗ್ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಮಾತನಾಡಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ನಾಯಕತ್ವ ಜಗ್ಗಾಟ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರಿಕೆ ಆಗಿದೆ. ಉಪಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ. ಐಟಿ ದಾಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಇದು ಲೂಟಿ ಸರ್ಕಾರ ಎಂಬುವುದು ಸಾಬೀತಾಗಿದೆ ಎಂದು ವಾಗ್ದಾಳಿ ಮಾಡಿದರು.
ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಟಿಎಂ ಆಗಿರುವುದಕ್ಕೆ ರಾಜ್ಯಕ್ಕೆ ವರಿಷ್ಠರು ಭೇಟಿ ನೀಡುತ್ತಿದ್ದಾರೆ. ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲ ರಾಜ್ಯಕ್ಕೆ ಬಂದಿದ್ದರು. ಎಲೆಕ್ಷನ್ ಟಾರ್ಗೆಟ್ ನೀಡಲು ಅವರಿಬ್ಬರೂ ರಾಜ್ಯಕ್ಕೆ ಬಂದಿದ್ದರು ಎಂದು ಹೇಳಿದರು.
ಬರ ಪರಿಹಾರ ಕೈಗೊಳ್ಳದೇ ಕೇಂದ್ರ ಸರ್ಕಾರಕ್ಕೆ ಮೂದಲಿಸುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಸಂಪನ್ಮೂಲದ ಒತ್ತಡದಲ್ಲಿರುವ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ಅನಗತ್ಯವಾಗಿ ಪ್ರಧಾನಿಯವರನ್ನ ಟೀಕೆ ಮಾಡುವುದು ಸಿದ್ದರಾಮಯ್ಯನವರ ಚಾಳಿಯಾಗಿದೆ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಬೆಳಗ್ಗೆ ಎದ್ದರೆ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಗರಂ ಆದರು.
ಇದನ್ನೂ ಓದಿ: ಕೇವಲ ಡಿನ್ನರ್ಗಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ರಾತ್ರಿ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಬಂದಿದ್ದರೆ?
ಶಾಸಕರಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ ಕೇವಲ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ತಾಂಡಾ, ಬೋವಿ, ಅಂಬೇಡ್ಕರ್ ನಿಗಮಕ್ಕೂ ಅನುದಾನ ನೀಡಿಲ್ಲ. 6 ತಿಂಗಳು ಸಮಯ ಕೊಟ್ಟಿದ್ದೇವು, ಆದರೆ ಯಾವುದೇ ಸುಧಾರಣೆ ಆಗಿಲ್ಲ. ಕಿಸಾನ್ ಸಮ್ಮಾನ್ ನಿಧಿಗೆ ನಮ್ಮ ಸರ್ಕಾರ 4 ಸಾವಿರ ರೂ. ಕೊಡುತ್ತಿದ್ದುದ್ದನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿದೆ. ಇದೇ ರೀತಿ ಸರ್ಕಾರ ಮುಂದುವರಿದರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ಕೊಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು ಯಾರನ್ನಾದರೂ ಅಧ್ಯಕ್ಷ ಮಾಡಲಿ, ಆದಷ್ಟು ಬೇಗ ಮಾಡಲಿ ಅಂತ ನಾನೂ ಒತ್ತಾಯ ಮಾಡುತ್ತೇನೆ. ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆಗಬೇಕು. ಆದಷ್ಟು ಬೇಗ ವಿಪಕ್ಷ ನಾಯಕರ ಆಯ್ಕೆ ಮಾಡಿ ಅಂತ ಒತ್ತಾಯ ಮಾಡಿದ್ದೇವೆ. ಡಿಸೆಂಬರ್ ಅಧಿವೇಶನದೊಳಗೆ ನೇಮಕ ಮಾಡಿಸಲು ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಆಪರೇಷನ್ ಕಮಲ ಬಗ್ಗೆ ಸಿಎಂ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ, ತನಿಖೆ ಮಾಡಿಸಿಲ್ಲ. ಅಂತಹ ಯಾವುದೇ ಘಟನೆ ಆಗಿಲ್ಲ. ನವೆಂಬರ್ 4ರ ಬಳಿಕ ಬೆಂಗಳೂರಿನಲ್ಲಿ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ.
ಕೇಂದ್ರ ಸರ್ಕಾರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು ದಿನ ಬೆಳಗಾದರೇ ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರೆ ನಿಮ್ಮನ್ನು ಯಾರು ಹತ್ತಿರಕ್ಕೆ ಸೇರಿಸುತ್ತಾರೆ? ಜವಾಬ್ದಾರಿಯುತ ಸ್ಥಾನದಡಲ್ಲಿರುವವರು ಈ ರೀತಿ ಎಲ್ಲಾ ಮಾತನಾಡಬಾರದು. ಬಿಡುವು ಮಾಡಿಕೊಂಡು ಹೋಗಿ ಎರಡು ದಿನ ಕುಳಿತುಕೊಳ್ಳಬೇಕು ಆವಾಗ ಭೇಟಿಗೆ ಅವಕಾಶ ಸಿಗುತ್ತೆ. ಅದು ಬಿಟ್ಟು ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಅನ್ನುವ ಹಾಗೆ ನಿಮ್ಮ ಈ ಬೇಜವಾಬ್ದಾರಿತನದ ಮಾತಿನಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತಿದೆ ಎಂದು ತಿರುಗೇಟು ನೀಡಿದರು.
ಕೇಂದ್ರ ಗೃಹ ಇಲಾಖೆಯಿಂದ ಝೆಡ್ ಪ್ಲಸ್ ಭದ್ರತೆ ಒದಗಿಸಿದ ವಿಚಾರವಾಗಿ ಮಾತನಾಡಿದ ಅವರು ನನಗೆ ಝೆಡ್ ಪ್ಲಸ್ ಭದ್ರತೆ ಬೇಡ ಅಂತ ಕೇಂದ್ರ ಗೃಹ ಸಚಿವರಿಗೆ ತಿಳಿಸಿದ್ದೇನೆ. ಈ ಹಿಂದೆ ಇದ್ದ ಭದ್ರತೆಯನ್ನೇ ಕೊಡಿ ಅಂತ ಮನವಿ ಮಾಡಿದ್ದೇನೆ. ಝೆಡ್ ಪ್ಲಸ್ ಭದ್ರತೆ ಇದ್ದರೆ ಜನ ಸಾಮಾನ್ಯರು, ಮುಖಂಡರನ್ನು ಭೇಟಿ ಮಾಡಲು ಕಷ್ಟ ಆಗುತ್ತದೆ. ನಾನು ಜನರ ನಡುವೆ ಇರುವವನು. ಕೇಂದ್ರ ಗೃಹ ಇಲಾಖೆಗೆ ಆ ಭದ್ರತೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ