ಬಿಜೆಪಿ ನ್ಯಾಷನಲ್​ ಪಾರ್ಟಿ, ಜೆಡಿಎಸ್​ ಹೆಬ್ಬೆಟ್ಟು ಪಾರ್ಟಿ: ಎಚ್​ಡಿಕೆ ಆರೋಪಕ್ಕೆ ಸಚಿವ ಆರ್ ಅಶೋಕ್ ತಿರುಗೇಟು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 27, 2022 | 1:04 PM

ಯಾರಾದರೂ ಹೇಳಿದರು ಎನ್ನುವ ಕಾರಣಕ್ಕೆ ಹೇಳಿದ ಕಡೆಗೆ ಹೆಬ್ಬೆಟ್ಟು ಒತ್ತಲು ಬೊಮ್ಮಾಯಿ ಅನಕ್ಷರಸ್ಥರಲ್ಲ. ಅವರು ಎಂಜಿನಿಯರಿಂಗ್ ಪದವೀಧರ ಎಂದು ಅಶೋಕ್ ಹೇಳಿದರು.

ಬಿಜೆಪಿ ನ್ಯಾಷನಲ್​ ಪಾರ್ಟಿ, ಜೆಡಿಎಸ್​ ಹೆಬ್ಬೆಟ್ಟು ಪಾರ್ಟಿ: ಎಚ್​ಡಿಕೆ ಆರೋಪಕ್ಕೆ ಸಚಿವ ಆರ್ ಅಶೋಕ್ ತಿರುಗೇಟು
ಸಚಿವ ಆರ್.ಅಶೋಕ್ ಮತ್ತು ಡಾ ಕೆ.ಸುಧಾಕರ್
Follow us on

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಎಂಬ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು. ಗೌರಿಬಿದನೂರು ತಾಲ್ಲೂಕು ಎ.ಕೆ.ಗೊಲ್ಲಹಳ್ಳಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನ್ಯಾಷನಲ್​ ಪಾರ್ಟಿ, ಜೆಡಿಎಸ್​ ಹೆಬ್ಬೆಟ್ಟು ಪಾರ್ಟಿ. ಹೆಚ್​.ಡಿ.ದೇವೇಗೌಡ ಕುಟುಂಬ ಹೇಳಿದ್ರೆ ಮಾತ್ರ ಹೆಬ್ಬೆಟ್ಟು ಒತ್ತುವುದು’ ಎಂದು ವ್ಯಂಗ್ಯವಾಡಿದರು. ಜೆಡಿಎಸ್​ನಲ್ಲಿ ಅಂದು, ಇಂದು, ಮುಂದೆಯೂ ದೇವೇಗೌಡರ ದರ್ಬಾರ್ ನಡೆಯುತ್ತದೆ. ಬಿಜೆಪಿಯಲ್ಲಿ ಜೆಡಿಎಸ್​ನಂತೆ ಕುಟುಂಬ ರಾಜಕಾರಣ ಇಲ್ಲ’ ಎಂದು ನುಡಿದರು.

ಯಾರಾದರೂ ಹೇಳಿದರು ಎನ್ನುವ ಕಾರಣಕ್ಕೆ ಹೇಳಿದ ಕಡೆಗೆ ಹೆಬ್ಬೆಟ್ಟು ಒತ್ತಲು ಬೊಮ್ಮಾಯಿ ಅನಕ್ಷರಸ್ಥರಲ್ಲ. ಅವರು ಎಂಜಿನಿಯರಿಂಗ್ ಪದವೀಧರ. ನಾಲ್ವರು ಮುಖ್ಯಮಂತ್ರಿಗಳ ಜೊತೆಗೆ ಅವರು ಪಳಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ದೇವೇಗೌಡ, ರಾಮಕೃಷ್ಣ ಹೆಗಡೆ, ಜಿ.ಎಚ್.ಪಟೇಲ್, ಯಡಿಯೂರಪ್ಪ ಅವರೊಂದಿಗೆ ಬೊಮ್ಮಾಯಿ ಪಳಗಿದ್ದಾರೆ. ಅವರ ತಂದೆಯೂ ಮುಖ್ಯಮಂತ್ರಿಯಾಗಿದ್ದವರು. ಬಸವರಾಜ ಬೊಮ್ಮಾಯಿಗೆ ಹೆಬ್ಬೆಟ್ಟು ಸಿಎಂ ಎಂದು ನೀವು ಟೀಕಿಸುವುದಾದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಮಾಡುತ್ತಿರುವ ಸಾಧನೆ ಕಂಡು ಕಾಂಗ್ರೆಸ್ಸಿಗರಿಗೆ ಹೊಟ್ಟೆ ಉರಿ ಬಂದಿದೆ. ಸುಮ್ಮನೇ ದಿನಕ್ಕೊಂದು ವಿಷಯ ಪ್ರಸ್ತಾಪಿಸಿ ಗಿಮಿಕ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ. ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷ​ ಸೋಲಲಿದೆ​. ಚುನಾವಣೆ ಬಳಿಕ ಕಾಂಗ್ರೆಸ್​ನವರು ರಾಜ್ಯ ಬಿಟ್ಟು ಹೋಗುತ್ತಾರೆ ಎಂದು ಘೋಷಿಸಿದರು.

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. 2012ರಿಂದಲೂ ಚಿಲುಮೆ ಸಂಸ್ಥೆಯೇ ಪರಿಷ್ಕರಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಗ ಯಾರೂ ಇದರ ಬಗ್ಗೆ ಬಾಯಿ ತೆರೆದಿರಲಿಲ್ಲ. ಈಗ ಮಾತ್ರ ಎಲ್ಲರೂ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗವೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ವಿವರಿಸಿದರು.

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬಲೆ ಹಾಕಲು ಬಂದ ಎಚ್​ಡಿಕೆ: ಸುಧಾಕರ್

ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಾತನಾಡಿ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್​ನವರು ಒಂದಿಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಲೆ ಹಾಕಲು ಎಚ್​​ಡಿಕೆ ಬಂದಿದ್ದಾರೆ. ಏನಾದ್ರೂ ಸಿಕ್ಕರೆ ಸಿಗಲಿ ಎನ್ನುವುದು ಅವರ ಧೋರಣೆ. ಆದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಜೆಡಿಎಸ್​​ಗೆ ನಿರಾಸೆ ಕಾದಿದೆ. ಕುಮಾರಸ್ವಾಮಿ ನಿರೀಕ್ಷೆ ಮಾಡಿದಷ್ಟು ಸ್ಥಾನ ಜೆಡಿಎಸ್​​ಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮೈತ್ರಿ ಸರ್ಕಾರವಿದ್ದಾಗ ಸ್ವತಃ ಕುಮಾರಸ್ವಾಮಿ ತಮ್ಮನ್ನು ತಾವು ಗುಮಾಸ್ತ ಎಂದು ಕರೆದುಕೊಳ್ಳುತ್ತಿದ್ದರು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಎಂದಿಗೂ ಆ ರೀತಿ ಹೇಳಿಲ್ಲ. ಆತ್ಮಸಾಕ್ಷಿಯಂತೆ ನಡೆದುಕೊಳ್ತಿದ್ದೇನೆ. ಹಿರಿಯರ ಮಾರ್ಗದರ್ಶನ, ಸಲಹೆ ಪಡೆಯುವೆ ಎಂದು ಸಿಎಂ ಹೇಳಿದ್ದಾರೆ. ಆದರೆ ಏನೇ ನಿರ್ಧಾರ ಇದ್ದರೂ ಸಿಎಂ ಬೊಮ್ಮಾಯಿ ತೆಗೆದುಕೊಳ್ಳುತ್ತಾರೆ. ಬೊಮ್ಮಾಯಿ ಹೆಬ್ಬೆಟ್ಟು ಸಿಎಂ ಆಗಿದ್ದರೆ ಮೀಸಲಾತಿ ಹೆಚ್ಚಳ ಆಗುತ್ತಿತ್ತಾ? ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಿಸಲು ಬೊಮ್ಮಾಯಿ ಅವರೇ ಬರಬೇಕಾಯಿತು. ಅಂಥವರನ್ನು ಹೆಬ್ಬೆಟ್ಟು ಸಿಎಂ ಎನ್ನಲು ಆದೀತೆ ಎಂದು ಪ್ರಶ್ನಿಸಿದರು.

Published On - 1:04 pm, Sun, 27 November 22