ವಿಜಯಪುರ, ಸೆಪ್ಟೆಂಬರ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅಸಮಾಧಾನ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರತಿಕ್ರಿಯಿಸಿದ್ದು, ಧಮ್ ಇದ್ದರೆ ಹರಿಪ್ರಸಾದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಈಗ ಧಮ್ ಪ್ರದರ್ಶನ ಮಾಡುವ ಕಾಲ ಬಂದಿದೆ. ಡಿಕೆ ಶಿವಕುಮಾರ್ ಧಮ್ ತೋರಿಸಲಿ. ಧಮ್ ಈ ವಾರದಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಂವಿಧಾನಾತ್ಮಕನಾಗಿ ಸಿಎಂ ಆಗಿದ್ದಾರೆ. ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅವರು ಆ ಪಕ್ಷಕ್ಕೆ ದುಡಿದಿದ್ದಾರೆ, ಸಿಎಂ ಆಗುವ ಯೋಗ್ಯತೆ, ಅರ್ಹತೆ ಇದೆ. ಹೀಗಾಗಿ ಸಿಎಂ ಆಗಿದ್ದಾರೆ. ಹೊಟ್ಟೆ ಕಿಚ್ಚು ಪಟ್ಟರೆ ಆಗೋದು ಏನಿದೆ. ನಿಮ್ಮ ಯೋಗ್ಯತೆ ಏನಿದೆ ಅಂತ ಅಳೆದುಕೊಳ್ಳಿ ಎಂದು ಹರಿಪ್ರಸಾದ್ಗೆ ಯತ್ನಾಳ್ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ರಾಜ್ಯದ ಹಿರಿಯ ನಾಯಕರು. ಅವರದೇ ಆದ ವರ್ಚಸ್ಸು ಇದೆ. ಅವರಿಗೆ ಯೋಗ್ಯತೆ ಇದೆ. ನಾಡಿನ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಮಜಾವಾದಿ ಅಂತ ಅವರು ಮಾತನಾಡಿಕೊಳ್ಳಲಿ. ಆದರೆ ನಾನು ಅದರ ಬಗ್ಗೆ ಮಾತನಾಡಲ್ಲ. ರಾಜ್ಯದ ಜನ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾನು ಗೌರವ ಕೊಡುತ್ತೇನೆ. ಮಜಾವಾದಿ ಅಂತ ಸಿದ್ದರಾಮಯ್ಯ ಹೆಸರು ಹೇಳದ ಹರಿಪ್ರಸಾದ್ ಹೇಳೋದಾದರೆ ಪೂರ್ತಿ ಹೇಳಲಿ. ಅರ್ಧಂಬರ್ಧ ಯಾಕೆ ಹೇಳ್ಬೇಕು ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರುಣಾನಿಧಿ ತಳಿಯೇ ದೇಶಕ್ಕೆ, ಧರ್ಮಕ್ಕೆ ನಿಷ್ಠೆ ಇಲ್ಲದ ವಿಷದ ಹಾವು; ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು
ಮಜಾವಾದಿ ಅನ್ನೋದು, ವಾಚ್ ಯಾವುದು ಕಟ್ಟುತ್ತಾರೆ ಅನ್ನೋದು ಅವೆಲ್ಲ ನಮಗೆ ಗೊತ್ತಿಲ್ಲ. ಅವರವರ ವೈಯಕ್ತಿಕ ಶೋಕಿ ಇರುತ್ತದೆ. ಅದಕ್ಕೆ ಕಟ್ಟುತ್ತಿರುತ್ತಾರೆ. ನಾವ್ಯಾಕೆ ತಕರಾರು ಮಾಡಬೇಕು? ಚೆಂದದ ಬಟ್ಟೆ ಹಾಕೋದು ಕೆಲವೊಬ್ಬರದು ಶೋಕಿ. ಕೆಲವೊಬ್ಬರದು ಜಾಕೆಟ್ ಹಾಕೋದು ಶೋಕಿ ಇರುತ್ತದೆ. ಅದೆಲ್ಲ ನಮಗ್ಯಾಕೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಅವರು ಸನಾತನ ಧರ್ಮದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಬಗ್ಗೆ ವಾಗ್ದಾಳಿ ನಡೆಸಿದ್ದರು. ಉದಯನಿಧಿ ಅವರ ಅಜ್ಜ, ತಮಿಳುನಾಡಿನ ಹಿರಿಯ ರಾಜಕಾರಣಿ ಕರುಣಾನಿಧಿ ಅವರ ವಿರುದ್ಧವೇ ಟೀಕಾ ಪ್ರಹಾರ ಮಾಡಿದ್ದ ಯತ್ನಾಳ್, ಅವರ ತಳಿಯೆ ವಿಷದ ಹಾವು ಎಂದಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ