AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರಿಲ್ಲ: ಡಿಕೆ ಶಿವಕುಮಾರ್

ತಮಿಳುನಾಡಿಗೆ 15 ದಿನ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಆದೇಶ ನೀಡಿದೆ. ಈ ಬಗ್ಗೆ ರೈತರು ಆಕ್ರೋಶ ಹೊರಹಾಕುತ್ತಿದ್ದು, ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ನೀರು ಬಿಡೋಕೆ ಸದ್ಯಕ್ಕೆ ನಮ್ಮತ್ರ ನೀರು ಇಲ್ಲ ಎಂದಿದ್ದಾರೆ.

ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರಿಲ್ಲ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Edited By: |

Updated on:Sep 12, 2023 | 7:06 PM

Share

ಬೆಂಗಳೂರು, ಸೆ.12: ತಮಿಳುನಾಡಿಗೆ ನೀರು ಬಿಡಲು ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ತಮಿಳುನಾಡಿಗೆ 15 ದಿನ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಕಾನೂನು ತಜ್ಞರ ಜೊತೆ ಮಾತನಾಡುತ್ತಿದ್ದೇವೆ ಎಂದರು.

ಕುಮಾರಕೃಪ ಗೆಸ್ಟ್ ಹೌಸ್ ಬಳಿ ಮಾತನಾಡಿದ ಅವರು, ನಾಳೆ ಮತ್ತೊಂದು ಮೇಲ್ಮಟ್ಟದ ಸಭೆ ಇದೆ. ಅಲ್ಲಿ ನಮ್ಮ ಅಧಿಕಾರಿಗಳು ಸದಸ್ಯರು ಆಗಿದ್ದಾರೆ. 5000 ಕ್ಯೂಸೆಕ್ ನೀರು ಬಿಡಬೇಕು ಅಂತ ಮಂಡಳಿ ಹೇಳಿದೆ. ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಅಂತ ಅಧಿಕಾರಿಗಳಿಗೆ ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದೇವೆ. ಆದರೆ ಅವರು 12,500 ಕ್ಯೂಸೆಕ್ ಬಿಡಿ ಅಂತ ಕೇಳಿದ್ದಾರೆ. ಆದರೆ, ನೀರು ಬಿಡಲು ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಆದೇಶ

ರೈತರ ಬೆಳೆಗಿಂತ ನಾವು ಕುಡಿಯುವ ನೀರಿಗಾಗಿ ಉಳಿತಾಯ ಮಾಡಬೇಕಿದೆ. ಸುಪ್ರಿಂ ಕೋರ್ಟ್ ಕೂಡ ನಾವು ನಿರ್ಧಾರ ಮಾಡಲು ಆಗಲ್ಲ ಅಂತ ಕೈ ಚೆಲ್ಲಿದೆ. ಆದರೆ ನಾವು ನೀರು ಬಿಡುವುದು ಬಹಳ ಕಷ್ಟ. ಈ ಬಗ್ಗೆ ಜನ ನಮಗೆ ಸಹಕಾರ ಕೊಡಬೇಕು, ವಿಪಕ್ಷಗಳು ರಾಜ್ಯದ ಹಿತಕ್ಕೆ ಸಹಕಾರ ನೀಡಬೇಕು ಎಂದರು.

ನಾನು ವಿಪಕ್ಷಗಳಂತೆ ಕಮಿಟಿ ರಾಜಕೀಯ ಮಾಡುತ್ತಿದೆ ಅಂತ ಹೇಳಲ್ಲ. ಅಲ್ಲಿ ಐವರು ಕೇಂದ್ರದ ಅಧಿಕಾರಿಗಳು ಇದ್ದಾರೆ. ಜಡ್ಜ್‌ಗಳು ಇದ್ದಾರೆ. ಇವರು ರಾಜಕೀಯ ಮಾಡುತ್ತಾರೆ ಅಂತ ನಾನು ಹೇಳಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇಂದಿನ ತೀರ್ಪು ದುರಾದೃಷ್ಟಕರ: ರೇವಣ್ಣ

ಕಾವೇರಿ ನದಿ ನೀರು ವಿಚಾರದ ಇಂದಿನ ತೀರ್ಪು ದುರಾದೃಷ್ಟಕರ ಎಂದು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ಕರ್ನಾಟಕದ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಡಿಎಂಕೆ ಎರಡೂ ಪಕ್ಷ ಇಂಡಿಯಾ ಒಕ್ಕೂಟದಲ್ಲಿ ಇವೆ. ಅಲ್ಲಿ ಲೋಕಸಭೆಯಲ್ಲಿ 40 ಸ್ಥಾನ ಗೆಲ್ಲುವ ಲೆಕ್ಕಾಚಾರ ಇದೆ. ಹಾಗಾಗಿ ಅವರನ್ನು ಮೆಚ್ಚಿಸಲು ನಮ್ಮ ರೈತರನ್ನು ವಂಚಿಸಲು ಹೀಗೆ ನಡೆಯುತ್ತಿದೆ ಅನ್ನಿಸುತ್ತಿದೆ ಎಂದರು.

ಮೈತ್ರಿಗಾಗಿ ಸರ್ಕಾರ ತಮಿಳುನಾಡಿನ ಎದುರು ಹೋರಾಟ ಮಾಡುತ್ತಿಲ್ಲ ಎಂದು ಆರೋಪಿಸಿದ ರೇವಣ್ಣ, ಈ ತೀರ್ಮಾನ ಕರಾಳ ನಿರ್ಣಯ ಎಂದರು. ರಾಜ್ಯ ಸರ್ಕಾರ ಸುಮ್ಮನೇ ಗ್ಯಾರಂಟಿ ಎಂದು ಕೂರುವುದಲ್ಲ. ಕೇಂದ್ರದ ಮುಂದೆ ಹೋಗಬೇಕು. ಈ ವಿಚಾರದಲ್ಲಿ ರಾಜಕೀಯ ಬೆರೆಸದೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ಕಾವೇರಿ ಪ್ರಾಧಿಕಾರ ಬಂದು ನೋಡಲಿ. ನೀರು ಇದ್ದರೆ ನೋಡಲಿ. ನಾಳೆ ಬೆಳಿಗ್ಗೆ ನೀರು ಬಿಟ್ಟರೆ ನಮಗೆ ಕುಡಿಯುವ ನೀರಿಲ್ಲ ಎಂದರೆ ವಾಪಸ್ ತರಲು ಆಗುತ್ತಾ ಎಂದು ಪ್ರಶ್ನಿಸಿದರು.

ನೀರನ ಸ್ಥಿತಿಗತಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ ರೇವಣ್ಣ, ಈ ವಿಚಾರದಲ್ಲಿ ನಾವು ಮಾತಾಡಿದರೆ ರಾಜಕೀಯ ಅಂತಾರೆ. ಈಗ ಕೆಲವರು ಪೇಪರ್ ಪೆನ್ನು ಕೊಡಿ ಅಂತಿದ್ದರು. ಕೊಟ್ಟಾಗಿದೆ. ಅದನ್ನ ಅವರು ಜನಕ್ಕೆ ಬಳಸುತ್ತಾರೋ, ರೈತರಿಗೆ ಬಳಸುತ್ತಾರೊ ಅಥವಾ ಗ್ಯಾರಂಟಿಗೆ ಬಳಸುತ್ತಾರೊ ಗೊತ್ತಿಲ್ಲ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ವಸ್ತು ಸ್ಥಿತಿ‌ ನೋಡಿದರೆ ಕುಡಿಯಲೂ ನೀರು ಸಿಗಲ್ಲ: ಬೊಮ್ಮಾಯಿ

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌, ವಸ್ತು ಸ್ಥಿತಿ‌ ನೋಡಿದರೆ ಕುಡಿಯಲೂ ನೀರು ಸಿಗಲ್ಲ. ಹೀಗಿರುವಾಗ ನೀರು ಬಿಡಲು ಸಾಧ್ಯವಿಲ್ಲ. ಸುಮಾರು 1 ಲಕ್ಷ‌ 10 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ‌ ನೀರಿಲ್ಲದೇ ಒಣಗಿ ನಿಂತಿದೆ. ಈಗ ಸಂಕಷ್ಟ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮೊದಲು ಸರ್ಕಾರ ಅಫಿಡವಿಟ್​ಗೆ ತಕ್ಕಂತೆ‌ ಗಟ್ಟಿಯಾಗಿ ನಿಲ್ಲಲಿ. ಕಾವೇರಿ ಜಲಾನಯನದವರ ಮೇಲೆ‌ ಬರೆ ಎಳೆದು ನೀರು‌ ಬಿಡುವುದಲ್ಲ. ತಮಿಳುನಾಡಿನ ಸಿಎಂ ಜೊತೆ ಮಾತುಕತೆ ಆಗಬೇಕು. ಸ್ಟಾಲಿನ್ ಜೊತೆ ಮಾತನಾಡಿ ವಸ್ತು ಸ್ಥಿತಿ ಮನವರಿಕೆ ಮಾಡಬೇಕು. ನಾವು ರಾಜ್ಯ ಸರ್ಕಾರದ ಜೊತೆ ನಿಲ್ಲುತ್ತೇವೆ. ಮತ್ತೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತಹದ್ದಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Tue, 12 September 23