ಬೆಂಗಳೂರು: ಕಾಂಗ್ರೆಸ್ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನಿಡಿದ್ದರು. ಈಗ ಅಕ್ಕಿಯ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾತುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತಿಗೆ ತಪ್ಪಿದ್ದಾರೆ ಎಂದು ಆರೊಪಿಸಿದರು.
ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ. ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡುವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ. ಕರೆಂಟ್ ವಿಚಾರದಲ್ಲಿಯೂ ಕಂಡಿಷನ್ ಹಾಕಿ ಅದನ್ನೇ ಮಾಡಿದ್ದಾರೆ. ಹತ್ತು ಕೆಜಿ ಅಕ್ಕಿಯನ್ನು ನರೇಂದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಸೆಂಬರ್ ವರೆಗೂ ಕೊಟ್ಟಿದೆ. ಇವರೇ ಮೊದಲೆಲ್ಲಾ ಎಷ್ಟೇ ಖರ್ಚಾದರೂ ಅಕ್ಕಿ ಕೊಡುವುದಾಗಿ ಹೇಳಿದವರು ಈಗ ಮಾತಿಗೆ ತಪ್ಪಿ ಜನರಿಗೆ ಎರಡೂವರೆ ಕೆಜಿ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: Anna Bhagya Scheme; ಐದು ಕೆಜಿ ಅಕ್ಕಿ ಬದಲಿಗೆ ಹಣ; ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ
ಅಕ್ಕಿ ಬದಲು ದುಡ್ಡು ಕೊಟ್ಟರೆ ತಿನ್ನಲಾಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ನಾವು ಅದೇ ಪ್ರಶ್ನೆಯನ್ನು ಅವರಿಗೆ ಕೇಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ, ಜನರಿಗೆ ಅಕ್ಕಿ ಕೊಡಿ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 60 ರೂಪಾಯಿ ಇದೆ. ನೀವು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡುವುದಾಗಿ ಹೇಳಿದ್ದೀರಿ. ಹಾಗಾದರೆ ನೀವು ಎರಡೂವರೆ ಕೆಜಿ ಅಕ್ಕಿಗೆ ಹಣ ನೀಡುತ್ತಿದ್ದೀರಿ. ಕೇಂದ್ರ ಸರ್ಕಾರ ಪಡಿತರದಾರರಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀವು 5+5 ಎಂದು ಹೇಳಿದ್ರಾ? 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ, ಈಗ ಕೊಡಿ. ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದ್ದೀರಿ. ರಾಜ್ಯದ ಜನರಿಗೆ ನೀವು ಮೋಸ ಮಾಡಿದ್ದೀರಿ ಎಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡುವಲ್ಲಿ ಜನರಿಗೆ ದೋಖಾ ಮಾಡುವುದು ಮುಂದುವರೆಸಿದೆ. ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರೆಂಟಿ ನೀಡಿ ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು..
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡುವಲ್ಲಿ ಜನರಿಗೆ ದೋಖಾ ಮಾಡುವುದು ಮುಂದುವರೆಸಿದೆ. ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರೆಂಟಿ ನೀಡಿ ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ.
1/3— Basavaraj S Bommai (@BSBommai) June 28, 2023
ರಾಜ್ಯ ಸರ್ಕಾರ ನೀಡುವ 170 ರೂ. ಗ್ರಾಮೀಣ ಮಹಿಳೆಯ ದಿನದ ಕೂಲಿಯ ಅರ್ಧದಷ್ಟು ಹಣವೂ ಆಗುವುದಿಲ್ಲ. ಸುಳ್ಳು ಗ್ಯಾರೆಂಟಿ ಗಳನ್ನು ಈಡೇರಿಸಲಾಗದೇ ಈಗ ಜನರಿಗೆ ದ್ರೋಹ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ. ಗಳಂತೆ ಹತ್ತು ಕೆಜಿಗೆ ತಗಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನರಿಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 28 June 23