ಬಿಜೆಪಿಯಲ್ಲಿ ಕೂಡ ಯಾರೂ 2 ಕ್ಷೇತ್ರದಿಂದ ಸ್ಪರ್ಧಿಸಲ್ಲ: ಕಮಲ ನಾಯಕರಿಗೆ ಪ್ರಹ್ಲಾದ್​ ಜೋಶಿ ಶಾಕ್​​

|

Updated on: Mar 27, 2023 | 4:12 PM

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲೂ ಕೂಡ 2 ಕ್ಷೇತ್ರದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಎಲ್ಲಾ ನಾಯಕರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಬಿಜೆಪಿಯಲ್ಲಿ ಕೂಡ ಯಾರೂ 2 ಕ್ಷೇತ್ರದಿಂದ ಸ್ಪರ್ಧಿಸಲ್ಲ: ಕಮಲ ನಾಯಕರಿಗೆ ಪ್ರಹ್ಲಾದ್​ ಜೋಶಿ  ಶಾಕ್​​
ಕೇಂಧ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಬಿಜೆಪಿಯಲ್ಲೂ (BJP) ಕೂಡ 2 ಕ್ಷೇತ್ರದಿಂದ (2 Constituency) ಯಾರೂ ಸ್ಪರ್ಧೆ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಎಲ್ಲಾ ನಾಯಕರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (Pralhad Joshi) ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಗೆಲ್ಲುವ ವಿಶ್ವಾಸವಿದೆ. ಮುಂದಿನ ಐದು ವರ್ಷಕ್ಕೂ ನೀವು ಶಾಸಕ ಅರವಿಂದ ಬೆಲ್ಲದ್ (Arvind Bellad)​ ಅವರಿಗೆ ಆಶೀರ್ವಾದ ಮಾಡುತ್ತೀರಿ ಅನ್ನೋ ನಂಬಿಕೆ ನನಗಿದೆ. ಅರವಿಂದ ಬೆಲ್ಲದ್ ಪರೀಕ್ಷೆ ಬರೆದಿದ್ದಾರೆ‌. ನೀವು ಇವಾಗ ಮಾರ್ಕ್ಸ್ ಹಾಕಬೇಕು, ನನ್ನ ಪ್ರಕಾರ ಅರವಿಂದ ಬೆಲ್ಲದ್ ಡಿಸ್ಟಿಂಕ್ಷನ್​​ನಲ್ಲಿ ಪಾಸ್ ಆಗುತ್ತಾರೆ ಎಂದು ಅರವಿಂದ ಬೆಲ್ಲದ ಪರ ಮತಯಾಚಿಸಿದರು.

ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದ ಬಳಿ 1,248 ಜಿ+3 ಮಾದರಿ ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ನಡೆಯುತ್ತಿರುವ ಬಹುದೊಡ್ಡ ಯೋಜನೆ ಇದಾಗಿದೆ. ಹೆಣ್ಣುಮಕ್ಕಳ ಹೆಸರಲ್ಲಿ ಮನೆ ವಿತರಿಸುವ ಕಲ್ಪನೆ ಜಾರಿಗೆ ತಂದಿದ್ದು ಮೋದಿ ಸರ್ಕಾರ. ಮೊದಲ ಭಾಷಣದಲ್ಲೇ ನನ್ನ ಸರ್ಕಾರ ಬಡವರಿಗೆ ಸಮರ್ಪಿತ ಎಂದಿದ್ದಾರೆ. 2004 ರಿಂದ 2014 ರ ವರೆಗೂ ಮನೆ ನಿರ್ಮಾಣಕ್ಕೆ 20 ಸಾವಿರ ಕೋಟಿ ರೂ. ಅವತ್ತಿನ ಸರ್ಕಾರ ಕೊಟ್ಟಿತ್ತು. ಆದರೆ ಮೋದಿ ಸರ್ಕಾರ ಮನೆ ಕಟ್ಟಲು 70 ಸಾವಿರ ಕೋಟಿ ಹಣ ಕೊಟ್ಟಿದೆ. 2004 ರಿಂದ 2014 ರ ವರೆಗೂ 13 ಲಕ್ಷ ಮನೆ ಮಂಜೂರ ಮಾಡಿದ್ದರು. ಆದರೆ ಅದು ಪೂರ್ಣ ಆಗಿರಲಿಲ್ಲ. ಆದರೆ ಮೋದಿ ಸರ್ಕಾರ 5 ವರ್ಷದಲ್ಲಿ 46 ಲಕ್ಷ ಮನೆಗಳನ್ನು ಕೊಟ್ಟಿದೆ. ಒಂದು ಕೋಟಿ 22 ಲಕ್ಷ ಮನೆಗಳಿಗೆ ನಾವು ಮಂಜೂರಾತಿ ಕೊಟ್ಟಿದ್ದೇವೆ. ಮನೆ ನಿರ್ಮಾಣಕ್ಕೆ ಯಾರಿಗೂ ಲಂಚ ಕೊಡುವ ಆಗತ್ಯವಿಲ್ಲ. ನನ್ನನ್ನು ಸೇರಿದಂತೆ ಯಾರಿಗೂ ಕೂಡ ಒಂದು ರೂಪಾಯಿ ಕೊಡಬೇಡಿ ಎಂದು ಕರೆ ನೀಡಿದರು.

ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ

ವಸತಿ ಸಚಿವ ವಿ.ಸೋಮಣ್ಣ ಜೊತೆ ನನಗೆ ವೈಯಕ್ತಿಕ ಬಾಂಧವ್ಯವಿದೆ. ಹೀಗಾಗಿ ವಸತಿ ಇಲಾಖೆಯಲ್ಲಿ ಕೆಲವು ಬದಲಾವಣೆಗೆ ನಾನು ಹೇಳಿದ್ದೆ. ಬೆಲ್ಲದ್ ನನ್ನ ಗಮನಕ್ಕೆ ತಂದಿದ್ದರು, ಹಾಗಾಗಿ ನಾನು ವಸತಿ ಸಚಿವರಿಗೆ ತಿಳಸಿದ್ದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಮೀಸಲಾತಿ ರದ್ದು ಮಾಡಲು ಆಗಲ್ಲ. ಸಾಮಾಜಿಕ ನ್ಯಾಯದಡಿ ಮೀಸಲಾತಿಯಲ್ಲಿ ಬದಲಾವಣೆ ತಂದಿದ್ದೇವೆ. ಲಿಂಗಾಯತರು, ಒಕ್ಕಲಿಗರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದೇವೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೆ ತಂದಿದ್ದೇವೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬರಲ್ಲ. ಹೀಗಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳ ಮೇಲೆ ಒತ್ತಡ ಹಾಕಿಲ್ಲ. ಡಿ.ಕೆ.ಶಿವಕುಮಾರ್ ಬಾಲಿಶ ಹೇಳಿಕೆ ನೀಡಿದ್ದಾರೆ. ಕಾರ್ಯಕರ್ತರಿಗೆ ಹೊಡೆಯುವುದು ಸಿದ್ದರಾಮಯ್ಯ ಸಂಸ್ಕೃತಿ. ಧಮ್ಕಿ ಹಾಕುವುದು ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಜೋಶಿ ವಾಗ್ದಾಳಿ ಮಾಡಿದರು.

ಎಲ್ಲರಿಗೂ ಮೀಸಲಾತಿ ಹೆಚ್ಚಿಸುವ ತಾಕತ್ತು ಕಾಂಗ್ರೆಸ್​ಗೆ ಇರಲಿಲ್ಲ

ಕಾಂಗ್ರೆಸ್ ಕಾಲದಲ್ಲಿಯೇ ಆಯೋಗ ರಚಿಸಲಾಗಿತ್ತು. ಆದರೆ ಅವರ ಅಧಿಕಾರದಲ್ಲಿ ಜಾರಿಗೆ ತರಲಿಲ್ಲ. ನಾವು ತಂದಿರೋದಕ್ಕೆ ಹೊಟ್ಟೆಕಿಚ್ಚು. ತಾವು ಅಧಿಕಾರಕ್ಕೆ ಬಂದರೆ ರದ್ದು ಮಾಡುತ್ತೇವೆ ಅಂತಾರೆ. ಅದರ ಅರ್ಥ ಒಕ್ಕಲಿಗರಿಗೆ, ಲಿಂಗಾಯಿತರಿಗೆ ಮೀಸಲಾತಿ ಕೊಟ್ಟಿರೋದಕ್ಕೆ ಕಾಂಗ್ರೆಸ್​ ಸಹಮತವಿಲ್ಲ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದರು. ಎಲ್ಲರಿಗೂ ಮೀಸಲಾತಿ ಹೆಚ್ಚಿಸುವ ತಾಕತ್ತು ಕಾಂಗ್ರೆಸ್​ಗೆ ಇರಲಿಲ್ಲ. ಅವೈಜ್ಞಾನಿಕವಾಗಿ, ಅಸಂವಿಧಾನಿಕವಾಗಿ ಮುಸ್ಲಿಮರಿಗೆ ಇವರು ಮೀಸಲಾತಿ ಕೊಟ್ಟಿದ್ದರು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬರುವುದಿಲ್ಲ. ಹೀಗಾಗಿ ಮುಸ್ಲಿಮರ ಮೀಸಲಾತಿಯನ್ನು ನಾವು ರದ್ದು ಮಾಡಿದ್ದೇವೆ. ಬಿಜೆಪಿ ಸರ್ಕಾರ ನಿರ್ಣಾಯಕ ಸರ್ಕಾರ. ಕಾಂಗ್ರೆಸ್ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಸರ್ವರಿಗೂ ಸಮಾನತೆ ಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮೋಸ ಮಾಡಿದ ಪಾರ್ಟಿ

5 ವರ್ಷ ಮುಖ್ಯಮಂತ್ರಿಯಾದವರಿಗೆ, 11 ಬಾರಿ ಬಜೆಟ್ ಮಂಡಿಸಿದವರಿಗೆ ಕ್ಷೇತ್ರ ಸಿಗುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್​​, ಮುನಿಯಪ್ಪಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲ್ಲುವುದಿಲ್ಲ. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಸೋಲುವ ಭೀತಿ ಇದೆ. ಯಾವ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಅನ್ನೋ ವಿಶ್ವಾಸ ಇಲ್ಲ. ಮೊದಲು ಕೋಲಾರ ಅಂತ ಅನೌನ್ಸ್ ಮಾಡಿದ್ದರು. ಇದು ಯಾರೋ ಹೇಳಿದ್ದು ಅಲ್ಲ, ಅವರೇ ಹೇಳಿದ್ದು. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮೋಸ ಮಾಡಿದ ಪಾರ್ಟಿ. ಇವರ ಸರ್ಕಾರದಲ್ಲಿ ಅನ್ಯಾಯದ ಪರಮಾವಧಿ ಇತ್ತು. ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:12 pm, Mon, 27 March 23