AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BS Yediyurappa: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ

ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ. 

ಗಂಗಾಧರ​ ಬ. ಸಾಬೋಜಿ
| Updated By: ವಿವೇಕ ಬಿರಾದಾರ|

Updated on:Mar 27, 2023 | 6:44 PM

Share

ಶಿವಮೊಗ್ಗ: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ (bs Yediyurappa) ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್​ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ರವಾನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಹಶೀಲ್ದಾರ್​ ವಿಶ್ವನಾಥ್​ರಿಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಒಳ ಮೀಸಲಾತಿ ಜಾರಿಗೆ ಪ್ರಭು ಚವ್ಹಾಣ್ ವಿರೋಧ

ಈ ನಡುವೆ ಬೊಮ್ಮಾಯಿ ಸಚಿವ ಸಂಪುಟದಲ್ಲೇ ಒಳ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತವಾಗಲು ಆರಂಭವಾಗಿದೆ. ಒಳಮೀಸಲಾತಿ ನೀಡುವುದನ್ನು ಆಕ್ಷೇಪಿಸಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ  ಅವರಿಗೆ ಸಚಿವ ಪ್ರಭು ಚವ್ಹಾಣ್ ಅವರು ಪತ್ರ ಬರೆದಿದ್ದು, ನ್ಯಾ. ಸದಾಶಿವ ಆಯೋಗ ವರದಿ ಮತ್ತು 2004ರ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಉನ್ನತ ಪೀಠವನ್ನು ರಚಿಸಿ ಪರಾಮರ್ಶಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ

ಒಳ ಮೀಸಲಾತಿ ಬಗ್ಗೆ ಡಾ.ಜಿ.ಪರಮೇಶ್ವರ್ ಬೇಸರ

ಹಲವು ವರ್ಷಗಳಿಂದಲೂ ಒಳ ಮೀಸಲಾತಿ ಬಗ್ಗೆ ಬೇಡಿಕೆ ಇತ್ತು. 4 ವರ್ಷದಿಂದ ನಿರ್ಧಾರ ಕೈಗೊಂಡಿರಲಿಲ್ಲ. ಜಾರಿಯಾಗದಿರಲಿ ಅಂತಾ ಕೊನೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಹೇಳಿದರು. ಇತ್ತೀಚೆಗೆ ತುಮಕೂರು  ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಬೇಡಿಕೆ ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ, ಈಗಿನ ಸರ್ಕಾರದ ಆರಂಭದಲ್ಲೂ‌ ಇತ್ತು.

ಒಳಮೀಸಲಾತಿಯ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ. ಇದನ್ನ ನಾನು ಸ್ವಾಗತಿಸಿದ್ರೂ ಇದೊಂದು ಚುನಾವಣಾ ಗಿಮಿಕ್​ ಎಂದರು. ಇದನ್ನ ಕಾನೂನಾತ್ಮಕವಾಗಿ ನೋಡುವುದಾದರೆ, ಒಳಮೀಸಲಾತಿಯನ್ನ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲಾ. ಅದು ಮುಂದೆ ಬರುವ ದಿನಗಳಲ್ಲಿ ತೀರ್ಮಾನ ಆಗುತ್ತೆ ಎಂದು ಹೇಳಿದರು.

ಮೀಸಲಾತಿ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನಿನ್ನೆ ಸುದ್ದಿಗೋಷ್ಠಿ ಮಾಡಿ ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ನಿರ್ಮಲಾನಂದನಾಥಶ್ರೀ, ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಅಂತಾ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಸ್ವಾಮೀಜಿಗಳಿಗೆಲ್ಲ ಫೋನ್​ ಮಾಡಿ ಒಪ್ಪಿಕೊಳ್ಳಿ ಅಂದರೆ ಸರೀನಾ ಲಿಂಗಾಯತರು 16%, ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡುವುದೇನಿತ್ತು? ಎಂದು ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯತ್ನಾಳ್ ತಿರುಗೇಟು

ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಎಲ್ಲಾ ಜನತೆಗೂ ಮೋಸ ಮಾಡೋಕೆ ಹೊರಟಿದ್ದಾರೆ. ಜನ ತಮ್ಮ ನೋವನ್ನ ವ್ಯಕ್ತಪಡಿಸಿ ಇವರ ದೋರಣೆಗೆ ದಿಕ್ಕಾರ ಕೂಗಲು ಸಜ್ಜಾಗುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದು ಕರಾಳ ದಿನಗಳಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. 75 ವರ್ಷಗಳ ಇತಿಹಾಸವಿದೆ. ರಿಸರ್ವೇಶನ್​ನ್ನ 90 ದಿನಗಳಲ್ಲಿ 3 ಬಾರಿ ಚೇಂಜ್ ಮಾಡಿದ್ದಾರೆ. ಈ ರೀತಿ ಬದಲಾವಣೆ ಮಾಡೋಕೆ ಇದೇನು ಆಸ್ತಿನಾ? ಸಂವಿಧಾನದ ಹಕ್ಕಿನ ಪ್ರಕಾರ ಕೊಡುವಂತೆ ನಾವೆಲ್ಲ ಕೇಳಿದ್ದೇವೆ.

ಒಕ್ಕಲಿಗ ಸಮುದಾಯ ಹಾಗೂ ಲಿಂಗಾಯತರೇನು ಭಿಕ್ಷುಕರೇನ್ರಿ? ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡಬೇಕು. ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತೆ. ನಾವೂ ಅಧಿಕಾರಕ್ಕೆ ಬಂದಮೇಲೆ ಇದನ್ನೆಲ್ಲ ರದ್ದು ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೆ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್​ ವಾಗ್ದಾಳಿ ಮಾಡಿದ್ದರು.

 ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್​ ಯುವ ಮುಖಂಡ ಪುನೀತ್ ನಾಯ್ಕ್ ಸೇರಿ ನಾಲ್ವರು ವಶಕ್ಕೆ ಪಡೆಯಲಾಗಿದೆ. ಕಾಂಗ್ರೆಸ್ ಮುಖಂಡ ಪುನೀತ್ ನಾಯ್ಕ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:37 pm, Mon, 27 March 23