ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (bs Yediyurappa) ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಸದಾಶಿವ ವರದಿಯಂತೆ ಮೀಸಲಾತಿ ಅನುಷ್ಠಾನ ಮಾಡಿಲ್ಲ. ನಮ್ಮ ಸಚಿವ ಸಂಪುಟ ತೀರ್ಮಾನದಂತೆ ಮಾಡಿದ್ದೇವೆ. ಕಾಂಗ್ರೆಸ್ ಅವರ ಕೃತ್ಯವನ್ನು ಖಂಡಿಸುತ್ತೇನೆ. ಸಮಾಜ ಪ್ರಕ್ಷುಬ್ಧಗೊಳಿಸುವಂತಹ ಕೆಲಸ ಮಾಡಬಾರದು. ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಮಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷ ಮಾಡುವಂತಹ ಕೆಲಸವಲ್ಲ. ಈ ಕೃತ್ಯ ಕ್ಷಮೆಗೆ ಅರ್ಹವಲ್ಲ. ಕಾಂಗ್ರೆಸ್ ಶಕುನಿ ಕೆಲಸ ಮಾಡುತ್ತಿರುವ ಬಗ್ಗೆ ಸುರ್ಜೆವಾಲ ಹೇಳಬೇಕು ಎಂದು ಹೇಳಿದರು.
ಇದು ರಾಜಕೀಯ ಪ್ರೇರಿತವೂ ಆಗಿರಬಹುದು: ಪ್ರಲ್ಹಾದ್ ಜೋಶಿ
ಘಟನೆ ಕುರಿತು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಮುತ್ಸದ್ಧಿ, ಹಿರಿಯ ರಾಜಕಾರಣಿ. ಅವರ ಮನೆ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಯಾರೂ ಸಹ ಈ ರೀತಿ ಮಾಡಬಾರದು. ಇದು ರಾಜಕೀಯ ಪ್ರೇರಿತವೂ ಆಗಿರಬಹುದು. ಚೆಕ್ ಮಾಡಿ ನೋಡುತ್ತೇವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.
ಯಾರು ವಿರೋಧ ಮಾಡುವವರಿಗೆ ಸಿಎಂ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಎಲ್ಲರಿಗೂ ಒಪ್ಪುವಂಥ ರೀತಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಸಂಬಂಧಿಸಿದವರನ್ನು ಕರೆದು ಮಾತನಾಡಿದ್ದಾರೆ. ಎಲ್ಲರಿಗೂ ಒಪ್ಪಿತವಾದ ಸೂತ್ರದಲ್ಲಿ ಮೀಸಲಾತಿ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಮನವರಿಕೆ ಮಾಡುತ್ತಾರೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಒಳ ಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ.
ಇದನ್ನೂ ಓದಿ: BS Yediyurappa: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ರವಾನೆ ಮಾಡಲಾಗಿದೆ.
ಶಿಕಾರಿಪುರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ
ಬಿಎಸ್ವೈ ನಿವಾಸದ ಮೇಲೆ ಪ್ರತಿಭಟನಾಕಾರಿಂದ ಕಲ್ಲುತೂರಾಟ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ವಿಶ್ವನಾಥ್ರಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: SC ST Internal reservation: ಒಳ ಮೀಸಲಾತಿ ಜಾರಿಗೆ ಸಚಿವ ಪ್ರಭು ಚವ್ಹಾಣ್ ವಿರೋಧ
2ಬಿ ಮೀಸಲಾತಿ ರದ್ದು ವಿಚಾರ: ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ
ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದು ಹಿನ್ನೆಲೆ ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೊಪ್ಪಳದ ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೂ ಪ್ರತಿಭಟಿಸಲಾಗಿದೆ. ಸಾವಿರಾರು ಸಂಖ್ಯೆಯ ಮುಸ್ಲಿಂ ಸಮುದಾಯದ ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಒಳ ಮೀಸಲಾತಿ ಬಗ್ಗೆ ಡಾ.ಜಿ.ಪರಮೇಶ್ವರ್ ಬೇಸರ
ಹಲವು ವರ್ಷಗಳಿಂದಲೂ ಒಳ ಮೀಸಲಾತಿ ಬಗ್ಗೆ ಬೇಡಿಕೆ ಇತ್ತು. 4 ವರ್ಷದಿಂದ ನಿರ್ಧಾರ ಕೈಗೊಂಡಿರಲಿಲ್ಲ. ಜಾರಿಯಾಗದಿರಲಿ ಅಂತಾ ಕೊನೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಗಿಮಿಕ್ ಅಲ್ಲದೇ ಬೇರೆ ಏನೂ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಇತ್ತೀಚೆಗೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಬೇಡಿಕೆ ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ, ಈಗಿನ ಸರ್ಕಾರದ ಆರಂಭದಲ್ಲೂ ಇತ್ತು.
ಒಳಮೀಸಲಾತಿಯ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ. ಇದನ್ನ ನಾನು ಸ್ವಾಗತಿಸಿದ್ರೂ ಇದೊಂದು ಚುನಾವಣಾ ಗಿಮಿಕ್ ಎಂದರು. ಇದನ್ನ ಕಾನೂನಾತ್ಮಕವಾಗಿ ನೋಡುವುದಾದರೆ, ಒಳಮೀಸಲಾತಿಯನ್ನ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲಾ. ಅದು ಮುಂದೆ ಬರುವ ದಿನಗಳಲ್ಲಿ ತೀರ್ಮಾನ ಆಗುತ್ತೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:46 pm, Mon, 27 March 23