BS Yediyurappa: ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ: ಬಿಎಸ್ ಯಡಿಯೂರಪ್ಪ
ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಯಡಿಯೂರಪ್ಪ, ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ ಎಂದಿದ್ದಾರೆ.
ಬೆಂಗಳೂರು: ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಏಕಾಏಕಿ ಕಲ್ಲು ತೂರಾಟದಿಂದ ನನಗೆ ನೋವಾಗಿದೆ ಎಂದಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮವನ್ನು ನಾನು ಮಾಡಿದ್ದೇನೆ. ತಪ್ಪು ಗ್ರಹಿಕೆಯಿಂದ ಇಂತಹ ಘಟನೆ ನಡೆದಿದೆ ಅಂತಾ ಭಾವಿಸಿದ್ದೇನೆ. ಬಂಜಾರ ಸಮುದಾಯದ (Banjara community) ಹಿರಿಯರನ್ನು ಕರೆದು ಮಾತನಾಡುತ್ತೇನೆ. ನಾನು ಮತ್ತು ವಿಜಯೇಂದ್ರ ಇಬ್ಬರೂ ಬಂಜಾರ ಸಮುದಾಯದ ಸಮಸ್ಯೆಗಳ ಚರ್ಚೆಗೆ ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳ ಮಾತು ಕೇಳಬೇಡಿ. ನಿಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. 4 ಬಾರಿ ಸಿಎಂ ಆಗಲು ಬಂಜಾರ ಸಮುದಾಯದವರು ಸಹಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ನಿಡಬೇಡಿ. ಬಂಜಾರ ಸಮುದಾಯದವರು ಶಾಂತ ರೀತಿಯಿಂದ ವರ್ತಿಸಬೇಕು. ನಾಳೆ ಅಥವಾ ನಾಡಿದ್ದು ಶಿವಮೊಗ್ಗಕ್ಕೆ ಹೋಗಿ ಘಟನೆಗೆ ಕಾರಣ ಏನೂ ಚರ್ಚಿಸುತ್ತೇನೆ ಎಂದು ಹೇಳಿದರು.
ನನ್ನನ್ನು ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ
ಯಾರ ಮೇಲೂ ಸದ್ಯಕ್ಕೆ ದೂರುವುದು ಸರಿ ಅನ್ನಿಸುವುದಿಲ್ಲ. ಶಿಕಾರಿಪುರಕ್ಕೆ ಭೇಟಿ ಬಳಿಕ ತಿಳಿದುಕೊಂಡ ಬಳಿಕ ಗೊತ್ತಾಗಲಿದೆ. ನನ್ನನ್ನು ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಡಿಸಿ, ಎಸ್ಪಿ ಜೊತೆಗೆ ಕರೆ ಮಾಡಿ ಮಾತನಾಡಿದ್ದೇನೆ. ಯಾರನ್ನೂ ಬಂಧಿಸದಂತೆ ಕಠಿಣ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದೇನೆ. ಬಿಜೆಪಿಯವರೇ ಮಾಡಿಸಿದ್ದಾರೆಂದು ಸುರ್ಜೇವಾಲ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಲ್ಲು ತೂರಾಟದಲ್ಲಿ ಯಾರದ್ದೂ ಕೈವಾಡವಿಲ್ಲವೆಂದು ಭಾವಿಸಿದ್ದೇನೆ ಎಂದರು.
ಇದನ್ನೂ ಓದಿ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಸಿಎಂ ಬೊಮ್ಮಾಯಿ
ಹಿಂಸಾಚಾರ ಮಾಡಬಾರದು: ಅಶ್ವಥ್ ನಾರಾಯಣ
ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ ಮಾತನಾಡಿ, ಯಡಿಯೂರಪ್ಪ ಅವರೇ ತಾಂಡ ನಿಮಗ ಮಾಡಿದ್ದು. ಲಂಬಾಣಿ ಸಮುದಾಯಕ್ಕೆ ನಾವು ಹೆಚ್ಚಿನ ಅನುದಾನ ನೀಡಿದ್ದೇವೆ. ಯಾರು ಸಹ ಹಿಂಸಾಚಾರ ಮಾಡಬಾರದು. ಸಮುದಾಯದವರು ಹಿಂಸಾಚಾರದ ಪ್ರತಿಭಟನೆ ಕೈ ಬಿಡಬೇಕು. ಬಂಜಾರ ಸಮುದಾಯವರು ಯಾವುದೇ ಸ್ಪಷ್ಟನೆ ಬೇಕಿದ್ದರೂ ಖುದ್ದು ಯಡಿಯೂರಪ್ಪ ಅವರ ಜೊತೆಯೇ ಮಾತನಾಡಬಹುದು ಎಂದು ತಿಳಿಸಿದರು.
ಡಿ.ಕೆ ಶಿವಕುಮಾರ್ ಸ್ವಾಮಿಜಿ ಮೇಲೆ ಮೀಸಲಾತಿ ಒಪ್ಪಲು ಒತ್ತಡ ಹಾಕಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ ಖುದ್ದು ಧಮಕಿ ಹಾಕುವ ರೀತಿ ಮಾತನಾಡಿದ್ದಾರೆ. ಇದನ್ನ ಬಿಜೆಪಿ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಡಿಕೆಶಿ ಯಾವುದೋ ಒಂದು ಧರ್ಮ ಅಥವಾ ಸಮುದಾಯವನ್ನ ಮುಂದಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದರು.
ಯಡಿಯೂರಪ್ಪನ ಹೆಸರಿಗೆ ಕಪ್ಪುಚುಕ್ಕೆ ತರಲು ವಿರೋಧ ಪಕ್ಷದವರು ಹೀಗೆ ಮಾಡಿದ್ದಾರೆ: ಪಿ.ರಾಜೀವ್
ಬೆಳಗಾವಿಯಲ್ಲಿ ಕುಡಚಿ ಶಾಸಕ ಪಿ.ರಾಜೀವ್ ಹೇಳಿಕೆ ನೀಡಿದ್ದು, ಯಡಿಯೂರಪ್ಪನವರ ಹೆಸರಿಗೆ ಕಪ್ಪುಚುಕ್ಕೆ ತರಲು ವಿರೋಧ ಪಕ್ಷ ಮುಂದಾಗಿದೆ. ಕರ್ನಾಟಕ ರಾಜ್ಯದ ಬಂಜಾರಾ, ಭೋವಿ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಸಮುದಾಯದವರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಆತಂಕಕ್ಕೆ ಒಳಗಾಗಬಾರದು. ಕೆಲವರು ಈ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಹೋರಾಟದಲ್ಲಿ ಪ್ರಮುಖ ಎರಡು ಬೇಡಿಕೆಗಳಿದ್ದವು. ಕಳೆದ ಐವತ್ತು ಅರವತ್ತು ವರ್ಷಗಳಿಂದ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಯಾವ ಸಿಎಂ ಮಾಡಿಲ್ಲ. ಆದರೆ ಸಿಎಂ ಬೊಮ್ಮಾಯಿ ಈ ನಾಲ್ಕು ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಹೀಗಾಗಿ ನಾವೆಲ್ಲ ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸೋಣ ಎಂದು ಹೇಳಿದರು.
ಇದನ್ನೂ ಓದಿ: BS Yediyurappa: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ತಾಂಡಾ ನಿಗಮ ಸ್ಥಾಪಿಸಿದ್ದು ಬಿ.ಎಸ್.ಯಡಿಯೂರಪ್ಪನವರು. 3% ಇದ್ದ ಮೀಸಲಾತಿಯನ್ನು 4.5% ಗೆ ಹೆಚ್ಚಳ ಮಾಡಿದರು. ಕೆಲವರು ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಮುದಾಯದ ಜನತೆ ಸುಳ್ಳು ಆಮಿಷಗಳಿಗೆ, ಉದ್ರೇಗಕ್ಕೆ ಒಳಗಾಗಬಾರದು. ಸಮುದಾಯವು ಸಹ ಯಡಿಯೂರಪ್ಪನವರ ಪರವಾಗಿದೆ. ಇದನ್ನ ವಿರೋಧ ಪಕ್ಷದವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ವೈಯಕ್ತಿಕ, ರಾಜಕೀಯ ಕಾರಣಕ್ಕಾಗಿ ಕಲ್ಲು ತೂರಾಟ, ಚಪ್ಪಲಿ ಎಸೆಯುವಂತಹ ಕೃತ್ಯ ಮಾಡಬಾರದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:23 pm, Mon, 27 March 23