ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯತ್ನಾಳ್ ತಿರುಗೇಟು
ಮೀಸಲಾತಿ ಒಪ್ಪಿಕೊಳ್ಳಿ ಎಂದು ಶ್ರೀಗಳಿಗೆ ಬಿಜೆಪಿಯವರು ಕರೆ ಮಾಡಿ ಒತ್ತಡ ಹಾಕಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ವಿಜಯಪುರ: ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ. ಗೂಂಡಾಗಳ ಬಾಯಲ್ಲಿ ಗೂಂಡಾ ಶಬ್ಧವೇ ಬರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಹೇಳಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರವಾಗಿ ಶ್ರೀಗಳಿಗೆ ಒತ್ತಡ ಹಾಕಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಆರೋಪಕ್ಕೆ ತಿರುಗೇಟು ನೀಡಿದರು. ಬಿಜೆಪಿ ಸರ್ಕಾರ ಎಸ್‌ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರದ ದೊಡ್ಡ ಸಾಧನೆ. ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಲು ಮೀಸಲಾತಿ ನೀಡಲಾಗಿದೆ. ಯಾರಾದರೂ ಸ್ವಾಮೀಜಿಗಳಿಗೆ ಬೆದರಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಯಾರಿಗೂ ಧಮ್ಕಿ ಹಾಕಿಲ್ಲ, ಧಮ್ಕಿ ಹಾಕಲು ಸಂಸ್ಕೃತಿ ಬಿಜೆಪಿಯದ್ದಲ್ಲ. ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ಹೇಳಿದರು.
ಎಲ್ಲರಿಗೂ ಮೀಸಲಾತಿ ನೀಡಲಾಗಿದೆ
2Aದಲ್ಲಿ 102 ಜಾತಿಗಳಿವೆ ಅವರಿಗೆ ಅನ್ಯಾಯವಾಗಬಾರದು. ಅವರ ಮೀಸಲಾತಿ ಕಸಿದುಕೊಂಡಂತೆ ಆಗಬಾರದು ಎಂಬ ಕಾರಣದಿಂದ ಪ್ರತ್ಯೇಕ ಮೀಸಲಾತಿ ನೀಡಲಾಗಿದೆ. 3B ಯಲ್ಲಿದ್ದವರಿಗೆ 2D ನೀಡಿ 7 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದಾರೆ. 15 ಪ್ಲಸ್ 7 ಒಟ್ಟು 22 ಪರ್ಸೆಂಟ್ ನಮ್ಮ ಹಿಂದುಳಿದ ಜನಾಂಗಕ್ಕೆ ಸಿಕ್ಕಿದೆ. ಪರಿಶಿಷ್ಟ ಜಾತಿಗೆ 2 ಪರ್ಸೆಂಟ್ ಏರಿಸಲಾಗಿದೆ. ಎಸ್ಟಿ ಜಾತಿಗೆ 3 ರಿಂದ 7 ಪರ್ಸೆಂಟ್ ಮಾಡಲಾಗಿದೆ. ಇದರಿಂದ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದರು.
ಇದನ್ನೂ ಓದಿ: ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ
ಪಿಐಎಲ್ನ್ನು ತಿರಸ್ಕಾರ ಮಾಡಿ ಹೈಕೋರ್ಟ್ ಗ್ರೀನ್ ಸಿಗ್ನಲ್
ಈ ಮೀಸಲಾತಿ ನೀಡಲು ಪ್ರಧಾನಮಂತ್ರಿಗಳೇ ನಿರ್ದೇಶನ ನೀಡಿದ್ದು ನಮಗೆ ಖುಷಿಯ ವಿಚಾರ. 2C ಹಾಗೂ 2D ಮೀಸಲಾತಿ ತಡೆಯಲು ಕಾಂಗ್ರೆಸ್ಸಿನ ಏಜೆಂಟ್ ಹೈಕೋರ್ಟಿನಲ್ಲಿ ಹಾಕಿದ್ದ ಪಿಐಎಲ್ ಕೂಡ ಇದೇ ವೇಳೆ ರದ್ದಾಗಿದ್ದು ನಮ್ಮ ಸುದೈವ. ಪಿಐಎಲ್ನ್ನು ತಿರಸ್ಕಾರ ಮಾಡಿ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮುಂದೆ ನಾವು ಎಕನಾಮಿಕ್ ವೀಕರ್ ಸೆಕ್ಷನ್ ಮಾಡಲಿದ್ದೇವೆ. ಇಲ್ಲಿ ಯಾವುದೇ ಮೀಸಲಾತಿಯನ್ನು ಪಡೆಯದೇ ಇರೋ ಎಲ್ಲಾ ಸಮುದಾಯದವರು ಸೇರುತ್ತಾರೆ. ಇದರಲ್ಲಿ ಕೇಂದ್ರ ಸರ್ಕಾರದ 10% ಮೀಸಲಾತಿ ಇದೆ ಮಾಹಿತಿ ನೀಡಿದರು.
ಡಿ.ಕೆ.ಶಿವಕುಮಾರ್ ಆರೋಪವೇನು?
ಒಕ್ಕಲಿಗ ಸಮುದಾಯ ಹಾಗೂ ವೀರೇಶ್ವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಘೋಷಣೆ ವಿಚಾರವಾಗಿ ನಿರ್ಮಲಾನಂದ ಸ್ವಾಮೀಜಿ ಹಾಗೂ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿಗೆ ಮೀಸಲಾತಿ ಒಪ್ಪಿಕೊಳ್ಳಿ ಎಂದು ಬಿಜೆಪಿಯವರು ಕರೆ ಮಾಡಿ ಒತ್ತಡ ಹಾಕಿದ್ದಾರೆ ಎಂದು ಡಿ.ಕೆ.ಶಿವಕುಮಾರ ಆರೋಪ ಮಾಡಿದ್ದರು.
ಇದನ್ನೂ ಓದಿ: ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ: ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ: ಸುರ್ಜೇವಾಲ
ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್‌ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಬಜೆಪಿ ವಿರುದ್ಧ ಕಿಡಿಕಾರಿದರು.
ಬಸವರಾಜ ಬೊಮ್ಮಾಯಿಯವರು ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಮೊದಲು. ರಾಜ್ಯವನ್ನು ಲೂಟಿ ಮಾಡ್ತಿದ್ದಾರೆ ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ. ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಇದು ಎಂದು ಸುರ್ಜೇವಾಲ ಗರಂ ಆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sun, 26 March 23