ಮೀಸಲಾತಿ: ಶ್ರೀಗಳಿಗೆ 25 ಬಾರಿ ಕರೆ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ: ಡಿಕೆ ಶಿವಕುಮಾರ್ ಸ್ಫೋಟಕ ಆರೋಪ
ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ನಿರ್ಮಲಾನಂದನಾಥಶ್ರೀ, ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ ಮಾಡಿ ಒಪ್ಪಿಕೊಳ್ಳಿ ಅಂತಾ ಒತ್ತಡ ಹಾಕಿದ್ದಾರೆ. ಸ್ವಾಮೀಜಿಗಳಿಗೆಲ್ಲ ಫೋನ್ ಮಾಡಿ ಒಪ್ಪಿಕೊಳ್ಳಿ ಅಂದರೆ ಸರೀನಾ ಲಿಂಗಾಯತರು 16%, ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡುವುದೇನಿತ್ತು? ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಎಲ್ಲಾ ಜನತೆಗೂ ಮೋಸ ಮಾಡೋಕೆ ಹೊರಟಿದ್ದಾರೆ. ಜನ ತಮ್ಮ ನೋವನ್ನ ವ್ಯಕ್ತಪಡಿಸಿ ಇವರ ದೋರಣೆಗೆ ದಿಕ್ಕಾರ ಕೂಗಲು ಸಜ್ಜಾಗುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದು ಕರಾಳ ದಿನಗಳಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. 75 ವರ್ಷಗಳ ಇತಿಹಾಸವಿದೆ. ರಿಸರ್ವೇಶನ್ನ್ನ 90 ದಿನಗಳಲ್ಲಿ 3 ಬಾರಿ ಚೇಂಜ್ ಮಾಡಿದ್ದಾರೆ. ಈ ರೀತಿ ಬದಲಾವಣೆ ಮಾಡೋಕೆ ಇದೇನು ಆಸ್ತಿನಾ? ಸಂವಿಧಾನದ ಹಕ್ಕಿನ ಪ್ರಕಾರ ಕೊಡುವಂತೆ ನಾವೆಲ್ಲ ಕೇಳಿದ್ದೇವೆ. ಒಕ್ಕಲಿಗ ಸಮುದಾಯ ಹಾಗೂ ಲಿಂಗಾಯತರೇನು ಭಿಕ್ಷುಕರೇನ್ರಿ? ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡಬೇಕು. ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತೆ. ನಾವೂ ಅಧಿಕಾರಕ್ಕೆ ಬಂದಮೇಲೆ ಇದನ್ನೆಲ್ಲ ರದ್ದು ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೆ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಗೆಲ್ಲಲು 3 ಪಕ್ಷಗಳ ರಣತಂತ್ರಗಳೇನು? ಸದ್ಯದ ಬಲಾಬಲಗಳೇನು? ರೆಡ್ಡಿ ಮಾಸ್ಟರ್ ಪ್ಲ್ಯಾನ್ಗಳೇನು?
ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ
ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಬಜೆಪಿ ವಿರುದ್ಧ ಕಿಡಿಕಾರಿದರು.
ಬಸವರಾಜ ಬೊಮ್ಮಾಯಿಯವರು ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಮೊದಲು. ರಾಜ್ಯವನ್ನು ಲೂಟಿ ಮಾಡ್ತಿದ್ದಾರೆ ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ. ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಇದು ಎಂದು ಸುರ್ಜೇವಾಲ ಗರಂ ಆದರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿಯವರು ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಸ್ತಿದ್ದಾರೆ. ಮೀಸಲಾತಿ ವರ್ಗೀಕರಣ ಮೂಲಕ ದ್ರೋಹ ಮಾಡುತ್ತಿದ್ದಾರೆ. ಸಂವಿಧಾನ ಎಲ್ಲಾ ವರ್ಗಕ್ಕೂ ರಕ್ಷಣೆ ಕೊಟ್ಟಿದೆ. ಸರ್ಕಾರ ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಬೇಕು. ಅವಕಾಶದಿಂದ ವಂಚಿತರಾದವರಿಗೆ ಮೀಸಲಾತಿ ಕೊಡಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಅಸಮಾನತೆ ಇದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:09 pm, Sun, 26 March 23