ಬೆಳಗಾವಿ: ಕರ್ನಾಟಕದಲ್ಲಿ ಈಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಕುರಿತು ಸೋಮವಾರ ಆತ್ಮಾವಲೋಕನ ನಡೆಯಿತು. ಖಾಸಗಿ ಹೋಟೆಲ್ನಲ್ಲಿ ನಡೆದ ಅವಲೋಕನ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಎಲ್ಲ ಪೋಸ್ಟ್ಮಾರ್ಟಮ್ ಆದಮೇಲೆ ಇನ್ನೇನು ಮಾತಾಡಬೇಕು ಎಂದು ಅವರು ನೇರವಾಗಿ ತಮ್ಮ ಸೋಲಿನ ಕುರಿತ ಬೇಸರ ಹೊರಹಾಕಿದರು. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ರಾಜ್ಯಾಧ್ಯಕ್ಷರು ವಿವರ ಪಡೆದಿದ್ದಾರೆ. ಸಭೆಯಲ್ಲಿ ಯಾರ ಬಗ್ಗೆಯೂ ಶಿಸ್ತುಕ್ರಮ ಜರುಗಿಸುವ ಚರ್ಚೆ ಆಗಲಿಲ್ಲ. ಸಮನ್ವಯದ ಕೊರತೆಯೇ ನನ್ನ ಸೋಲಿಗೆ ಕಾರಣ. ಪಕ್ಷೇತರರ ಅಭ್ಯರ್ಥಿಯಿಂದಾಗಿ ಸೋಲೊಪ್ಪಬೇಕಾಯಿತು ಎಂದು ನಾನು ಹೇಳುವುದಿಲ್ಲ. ನಾನು ಹೇಳಬೇಕು ಎಂದುಕೊಂಡಿದ್ದ ಎಲ್ಲ ವಿವರಗಳನ್ನೂ ಪಕ್ಷದ ವೇದಿಕೆಯಲ್ಲಿ ಹೇಳಿದ್ದೇನೆ. ಎಲ್ಲ ವಿಷಯವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಪ್ರಥಮ ಪ್ರಾಶಸ್ತ್ಯ ಮತ ಕೇಳುವುದರಲ್ಲಿ ನಾವು ವಿಫಲರಾದೆವು ಎನ್ನಲು ಆಗುವುದಿಲ್ಲ. ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಕಾರಣ ಎಂದರು.
ಅವಲೋಕನಾ ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಲಕ್ಷ್ಮಣ ಸವದಿ, ಸೋಲಿನ ಬಗ್ಗೆ ವರಿಷ್ಠರು ಅಂತರಿಕ ವರದಿ ತರಿಸಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ 15 ಕ್ಷೇತ್ರ ಗೆಲ್ಲುವ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕವಟಗಿಮಠ ಸೋಲಿನ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ ಎಂದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಮಾತನಾಡಿ, ಸೋಲಿನ ಕುರಿತು ಸಭೆಯಲ್ಲಿ ಪರಾಮರ್ಶೆ ಮಾಡಲಾಗಿದೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನೂ ಪಡೆದುಕೊಂಡಿದ್ದೇವೆ. ಮತ್ತಷ್ಟು ಜನರ ಅಭಿಪ್ರಾಯ ಸಂಗ್ರಹಿಸುವುದು ಬಾಕಿ ಇದೆ ಎಂದರು.
ಅಶಿಸ್ತಿನ ವರ್ತನೆ ತೋರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಮತ್ತೊಂದು ದೊಡ್ಡಮಟ್ಟದ ಅವಲೋಕನ ಸಭೆಯ ಬಳಿಕ ಕಾರಣ ಸೋಲಿಗೆ ಕಾರಣ ಹುಡುಕಲಾಗುತ್ತದೆ. ಮತದಾರ ಬೇರೆ ರೀತಿಯ ಆಲೋಚನೆ ಮಾಡಿದ್ದರಿಂದ ಬಿಜೆಪಿಗೆ ಸೋಲುಂಟಾಯಿತು ಎಂದು ಹೇಳಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಪಿ.ರಾಜೀವ್, ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ ಸಭೆಯಿಂದ ದೂರವೇ ಉಳಿದಿದ್ದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿದ ದುರ್ಬಲ ಗೃಹಮಂತ್ರಿ ಆಕ್ಷೇಪ: ಕಾವೇರಿದ ಚರ್ಚೆ, ಗದ್ದಲ, ಸಭಾತ್ಯಾಗ