ಮೈಸೂರು: ಮತದಾರರ ದತ್ತಾಂಶ ಕಳವು ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೋಟ (Mangaluru cooker blast) ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 19ರಿಂದ ಮೂರು ದಿನಗಳ ಕಾಲ ಕರ್ನಾಟಕದಾದ್ಯಂತ ಡಿಕೆಶಿ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿದೆ. ಆದ್ರೆ, ಇದೀಗ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H VIshwanath), ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನೀವು ಮತದಾರ ಪಟ್ಟಿಯನ್ನೇ ಬದಲಿಸುತ್ತಿದ್ದೀರಲ್ಲ ನಾಚಿಕೆ ಆಗಲ್ವಾ? ಬಿಜೆಪಿಯವರು ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದಾರೆ. ಬಿಜೆಪಿಯ ಈ ನಡೆಯನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಯಾಕಿಷ್ಟು ಸುಳ್ಳು ಹೇಳ್ತಿದ್ದೀರಿ. ಡಿಕೆಶಿ ಆಗಲಿ ಕಾಂಗ್ರೆಸ್ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರಂತೆ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.
ಚುನಾವಣೆಯೇ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದೀರಿ. ಅದನ್ನ ಕೇಳಿದಾಗ ಇನ್ಯಾವುದನ್ನೋ ತಂದು ಬಿಟ್ಟು ಬಿಡ್ತಿರಿ, ಬಿಜೆಪಿ ಈ ನಡೆಯನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಯಾಕಿಷ್ಟು ಸುಳ್ಳು ಹೇಳ್ತಿದ್ದೀರಿ. ಡಿಕೆಶಿ ಆಗಲಿ, ಕಾಂಗ್ರೆಸ್ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ. ನೀವೇ ಸುಮ್ಮನೆ ಮಾತನಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ಪರ ಬ್ಯಾಟಿಂಗ್ ಮಾಡಿದರು.
ಕಾಂಗ್ರೆಸ್ಗೆ ಹೋಗುವ ಸಂದರ್ಭ ಬಂದರೆ ಹೋಗುತ್ತೇನೆ. ಇಲ್ಲವಾದರೆ ಬಿಜೆಪಿಯಲ್ಲೇ ಇರುತ್ತೇನೆ. ಅದರಲ್ಲಿ ಏನಿದೆ? ಯಾವ ಪಕ್ಷದಲ್ಲಿದ್ರೂ ಅದರ ತಪ್ಪಿನ ಬಗ್ಗೆ ಮಾತಾಡುತ್ತೇನೆ. ನನ್ನ ಅಜೆಂಡಾದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಹೆಚ್.ವಿಶ್ವನಾಥ್ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೇ ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಆ ಬೆಳವಣಿಗೆ ಆದಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಮೂಲಗಳ ಪ್ರಕಾರ ವಿಶ್ವನಾಥ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಮುಖ ಮಾಡಿದ್ದು, ಈ ಬಗ್ಗೆ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:27 pm, Sat, 17 December 22