ಬಿಜೆಪಿ ನಾಯಕರ ಕಿತ್ತಾಟದಲ್ಲಿ ಆಪರೇಷನ್ ಕಮಲದ ಹಣ ಬಯಲಿಗೆ, ಕಾಂಗ್ರೆಸ್ನಿಂದ ಲೋಕಾಯುಕ್ತಕ್ಕೆ ದೂರು
ಬಿಜೆಪಿ ನಾಯಕರ ಕಿತ್ತಾಟದಿಂದ ಆಪರೇಷನ್ ಕಮಲದ ಹಣ ವಿಚಾರ ಬಯಲಿಗೆ ಬಂದಿದ್ದು, ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲು ವಿರೋಧ ಪಕ್ಷ ಕಾಂಗ್ರೆಸ್ ಮುಂದಾಗಿದೆ.
ಬೆಂಗಳೂರು: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ಹಾಗೂ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು, ಇದರ ಮಧ್ಯೆ ಹಣದ ವಿಚಾರ ಬಾಯ್ಬಿಟ್ಟಿದ್ದಾರೆ. ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಕಾಂಗ್ರೆಸ್, ಸಂಸದ ಶ್ರೀನಿವಾಸ ಪ್ರಸಾದ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದೆ.
ಹುಣಸೂರು ಬೈ ಎಲೆಕ್ಷನ್ ಅಲ್ಲಿ ಬಿಜೆಪಿ ನೀಡಿದ್ದ 15 ಕೋಟಿ ರೂಪಾಯಿ ಹಣದಲ್ಲಿ 10 ಕೋಟಿ ರೂಪಾಯಿಯನ್ನು ತಮ್ಮ ಜೇಬಿಗೆ ವಿಶ್ವನಾಥ್ ಇಳಿಸಿಕೊಂಡಿದ್ದರು ಎಂದು ಶ್ರೀನಿವಾಸ್ ಪ್ರಸಾದ್ ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ಶ್ರೀನಿವಾಸ ಪ್ರಸಾದ್ ಹೇಳಿಕೆ ಹಾಗೂ ಹಣದ ವಹಿವಾಟಿನ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಇಂದು(ಡಿಸೆಂಬರ್ 17) ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆಯನ್ನು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದೆ.
ಶ್ರೀನಿವಾಸ್ ಪ್ರಸಾದ್ ಆರೋಪ
ಹುಣಸೂರು ಬೈ ಎಲೆಕ್ಷನ್ ಅಲ್ಲಿ ಬಿಜೆಪಿ ನೀಡಿದ್ದ 15 ಕೋಟಿ ರೂಪಾಯಿ ಹಣದಲ್ಲಿ ಚುನಾವಣೆಗೆ ಕೇವಲ 4 ರಿಂದ 5 ಲಕ್ಷ ಖರ್ಚು ಮಾಡಿದ್ದಾರೆ. 10 ಕೋಟಿ ಮನೆಗೆ ತಗೆದುಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್, ಬಾರ್ ಮಾಡಿಕೊಂಡಿದ್ದು ಯಾವ ಹಣದಲ್ಲಿ ಹೇಳಿ? ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದರು.
ವಿಶ್ವನಾಥ್ ತಿರುಗೇಟು
ಹುಣಸೂರು ಉಪಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಸೈನಿಕನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ಆದ್ರೆ. ಸೈನಿಕ ಹುಣಸೂರಿಗೆ ಬರಲಿಲ್ಲ. ಈ ವಿಚಾರವನ್ನು ಈಗಾಗಲೇ ಹೇಳಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದವರು ದುಡ್ಡು ಕೊಡುತ್ತಾರೆ ಎಂದು ವಿಶ್ವನಾಥ್, ಶ್ರಿನಿವಾಸ್ ಪ್ರಸಾದ್ಗೆ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ನಾಯಕರ ಕಿತ್ತಾಟದಿಂದ ಆಪರೇಷನ್ ಕಮಲದ ಹಣ ವಿಚಾರ ಬಯಲಿಗೆ ಬಂದಿದ್ದು, ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲು ವಿರೋಧ ಪಕ್ಷ ಕಾಂಗ್ರೆಸ್ ಮುಂದಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ