ಕಾಂಗ್ರೆಸ್​ಗೆ ಹೋಗುವ ಸಂದರ್ಭ ಬಂದ್ರೆ ಹೋಗ್ತೇನೆ, ಯಾವ ಪಕ್ಷದಲ್ಲಿದ್ರೂ ಅದರ ತಪ್ಪಿನ ಬಗ್ಗೆ ಮಾತಾಡ್ತೇನೆ: ವಿಶ್ವನಾಥ್

ನೀವು ಮತದಾರ ಪಟ್ಟಿಯನ್ನೇ ಬದಲಿಸುತ್ತಿದ್ದೀರಲ್ಲ ನಾಚಿಕೆ ಆಗಲ್ವಾ?ಎಂದು ಸ್ವಪಕ್ಷದ ವಿರುದ್ಧವೇ ಹೆಚ್​ ವಿಶ್ವನಾಥ್ ವಿರೋಧ ಪಕ್ಷದ ರೀತಿಯಲ್ಲಿ ಗುಡುಗಿದ್ದಾರೆ.

ಕಾಂಗ್ರೆಸ್​ಗೆ ಹೋಗುವ ಸಂದರ್ಭ ಬಂದ್ರೆ ಹೋಗ್ತೇನೆ, ಯಾವ ಪಕ್ಷದಲ್ಲಿದ್ರೂ ಅದರ ತಪ್ಪಿನ ಬಗ್ಗೆ ಮಾತಾಡ್ತೇನೆ: ವಿಶ್ವನಾಥ್
ಹೆಚ್ ವಿಶ್ವನಾಥ್, ಎಮ್ ಎಲ್ ಸಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 17, 2022 | 6:30 PM

ಮೈಸೂರು: ಮತದಾರರ ದತ್ತಾಂಶ ಕಳವು ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ರಾಜ್ಯ ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಸ್ಫೋಟ (Mangaluru cooker blast) ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar)​ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 19ರಿಂದ ಮೂರು ದಿನಗಳ ಕಾಲ ಕರ್ನಾಟಕದಾದ್ಯಂತ ಡಿಕೆಶಿ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿದೆ. ಆದ್ರೆ, ಇದೀಗ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H VIshwanath)​, ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಮರಳಿ ಕಾಂಗ್ರೆಸ್‌ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನೀವು ಮತದಾರ ಪಟ್ಟಿಯನ್ನೇ ಬದಲಿಸುತ್ತಿದ್ದೀರಲ್ಲ ನಾಚಿಕೆ ಆಗಲ್ವಾ? ಬಿಜೆಪಿಯವರು ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದಾರೆ. ಬಿಜೆಪಿಯ ಈ ನಡೆಯನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಯಾಕಿಷ್ಟು ಸುಳ್ಳು ಹೇಳ್ತಿದ್ದೀರಿ. ಡಿಕೆಶಿ ಆಗಲಿ ಕಾಂಗ್ರೆಸ್​​​ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರಂತೆ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಚುನಾವಣೆಯೇ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕನ್ನೇ ಕಸಿಯಲು ಹೊರಟಿದ್ದೀರಿ. ಅದನ್ನ ಕೇಳಿದಾಗ ಇನ್ಯಾವುದನ್ನೋ ತಂದು ಬಿಟ್ಟು ಬಿಡ್ತಿರಿ, ಬಿಜೆಪಿ ಈ ನಡೆಯನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಯಾಕಿಷ್ಟು ಸುಳ್ಳು ಹೇಳ್ತಿದ್ದೀರಿ. ಡಿಕೆಶಿ ಆಗಲಿ, ಕಾಂಗ್ರೆಸ್ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ. ನೀವೇ ಸುಮ್ಮನೆ ಮಾತನಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ಪರ ಬ್ಯಾಟಿಂಗ್ ಮಾಡಿದರು.

ಕಾಂಗ್ರೆಸ್​ಗೆ ಹೋಗುವ ಸಂದರ್ಭ ಬಂದರೆ ಹೋಗುತ್ತೇನೆ. ಇಲ್ಲವಾದರೆ ಬಿಜೆಪಿಯಲ್ಲೇ ಇರುತ್ತೇನೆ. ಅದರಲ್ಲಿ ಏನಿದೆ? ಯಾವ ಪಕ್ಷದಲ್ಲಿದ್ರೂ ಅದರ ತಪ್ಪಿನ ಬಗ್ಗೆ ಮಾತಾಡುತ್ತೇನೆ. ನನ್ನ ಅಜೆಂಡಾದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಹೆಚ್​.ವಿಶ್ವನಾಥ್ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಇತ್ತೀಚೆಗಷ್ಟೇ ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಆ ಬೆಳವಣಿಗೆ ಆದಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಮೂಲಗಳ ಪ್ರಕಾರ ವಿಶ್ವನಾಥ್ ಅವರು ಬಿಜೆಪಿ ತೊರೆದು ಕಾಂಗ್ರೆಸ್​ನತ್ತ ಮುಖ ಮಾಡಿದ್ದು, ಈ ಬಗ್ಗೆ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:27 pm, Sat, 17 December 22