ಮರಳಿ ಕಾಂಗ್ರೆಸ್ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!
ಬಾಯ್ಬಿಟ್ರೆ ಸಾಕು ಸ್ವಪಕ್ಷದ ವಿರುದ್ಧ ಕಿಡಿಕಾರುವ ಬಿಜೆಪಿ ವಿಧಾನಪರಿಷತ್ ಸದಸ್ಯ ವಿಶ್ವನಾಥ್, ಇದೀಗ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಸೇರುವ ಲಕ್ಷಣಗಳು ಕಾಣುತ್ತಿವೆ. ಕರ್ನಾಟಕ ಹಾಗೂ ದೆಹಲಿಯಲ್ಲಿ ನಡೆದ ಈ ಅನಿರೀಕ್ಷಿತ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಬಿಜೆಪಿಯಲ್ಲಿದ್ದರೂ ಅಕ್ಷರಶಃ ವಿರೋಧ ಪಕ್ಷದ ನಾಯಕನ ರೀತಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಗೂಡಿಗೆ ಸೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದೆ. ಅಲ್ಲದೇ ಇದೀಗ ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ವಿಶ್ವನಾಥ್, ಆರೋಗ್ಯ ವಿಚಾರಿಸುವ ನೆಪದಲ್ಲಿ ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಬಳಿಕ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಹಳ್ಳಿಹಕ್ಕಿ ವಿಶ್ವನಾಥ್, ಇಂದು(ಡಿಸೆಂಬರ್ 09) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿದ ವಿಶ್ವನಾಥ್, ಕೆಲಕಾಲ ಸಮಾಲೋಚನೆ ಸಹ ನಡೆಸಿದರು. ಎಂಎಲ್‌ಸಿ ವಿಶ್ವನಾಥ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರು ಸಾಥ್ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಡಗೂರು ಎಚ್. ವಿಶ್ವನಾಥ್, ಕಾಂಗ್ರೆಸ್ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ, ಕೆಲಕಾಲ ಮಾತುಕತೆ ಸಹ ನಡೆಸಿದ್ದರು. ಇದಕ್ಕೂ ಮುನ್ನ ದೆಹಲಿಗೆ ಭೇಟಿ ನೀಡಿದ್ದ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಹ ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಹೀಗೆ ಕಾಂಗ್ರೆಸ್ನ ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ಮತ್ತೆ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧೋರಣೆ ಹಿನ್ನೆಲೆಯಲ್ಲಿ ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಆದರೆ, ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಜಿಗಿದಿದ್ದರು. ಆದರೆ, ಬಿಜೆಪಿಯಲ್ಲೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕನಕಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರವರ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದರು. ಸಮುದಾಯದ ಮುಖಂಡರನ್ನು ಒಟ್ಟಿಗೆ ಸೇರಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಈ ವಿದ್ಯಮಾನಗಳ ಬೆನ್ನಲ್ಲೆ ವಿಶ್ವನಾಥ್, ಖರ್ಗೆ, ಡಿಕೆಶಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಒಟ್ಟಿನಲ್ಲಿ ಇದಾಗಲೇ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ಎಚ್ ವಿಶ್ವನಾಥ್, ಸ್ವಪಕ್ಷದ ಸಿಎಂ ಬಸವರಾಜ ಬೊಮ್ಮಾಯಿ ಸಂಸದ ಪ್ರತಾಪಸಿಂಹ ಸೇರಿ ಹಲವರ ವಿರುದ್ದ ತಿರುಗಿ ಬಿದ್ದಿದ್ದು,ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ