ಡಿಕೆ ಶಿವಕುಮಾರ್​ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

|

Updated on: Nov 09, 2023 | 9:12 AM

ಕರ್ನಾಟಕದಲ್ಲಿ ಆಪರೇಷನ್ ಕಮಲ, ಆಪರೇಷನ್ ಹಸ್ತ ಸುದ್ದಿ ಗದ್ದಲಗಳ ಮಧ್ಯೆ ತೇಜಸ್ವಿ ಸೂರ್ಯ ಅವರು ನಿನ್ನೆ(ನವೆಂಬರ್ 08) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಇದೀಗ ಸ್ವತಃ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟಿದ್ದು, ಅದು ಈ ಕೆಳಗಿನಂತಿದೆ.

ಡಿಕೆ ಶಿವಕುಮಾರ್​ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ
Follow us on

ಬೆಂಗಳೂರು, (ನವೆಂಬರ್ 09): ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ದಿಢೀರ್ ಭೇಟಿಯಾಗುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆಪರೇಷನ್ ಕಮಲ, ಆಪರೇಷನ್ ಹಸ್ತ ಸುದ್ದಿ ಗದ್ದಲಗಳ ಮಧ್ಯೆ ತೇಜಸ್ವಿ ಸೂರ್ಯ ಅವರು ನಿನ್ನೆ(ನವೆಂಬರ್ 08) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಇದೀಗ ಸ್ವತಃ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನ ಮೂಲಭೂತ ಸೌಕರ್ಯ, ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದೆ ಎಂದು ಹಲವು ಚರ್ಚೆಗಳು ಶುರುವಾದ ಬೆನ್ನಲ್ಲೇ ತೇಜಸ್ವಿ ಸೂರ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಏನೆಲ್ಲಾ ಚರ್ಚೆ ನಡೆಸಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ, ವಿನಯ್ ಕುಲಕರ್ಣಿ ಮಂತ್ರಿಯಾಗುತ್ತಾರೆ: ಭವಿಷ್ಯ ನುಡಿದ ಜೈನ ಮುನಿ

ಡಿಕೆಶಿ ಜತೆ ತೇಜಸ್ವಿ ಸೂರ್ಯ ಚರ್ಚೆ ಮಾಡಿದ್ದೇನು?

1) ಕಳೆದ 5-6 ತಿಂಗಳುಗಳಿಂದ ಕೆ – ರೈಡ್ & ಬಿ.ಎಂ.ಆರ್.ಸಿ.ಎಲ್ ನ ಎಂ.ಡಿ ಹುದ್ದೆಗಳು ಖಾಲಿಯಿದ್ದು, ಈ ಕುರಿತು ನಾನು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದ ಬಹುಮುಖ್ಯ ಕಾಮಗಾರಿಗಳಿಗೆ ಪೂರ್ಣಾವಧಿ ಎಂ.ಡಿ ನೇಮಕದ ಅಗತ್ಯತೆ ಬಗೆಗೆ ಶ್ರೀ ಡಿ ಕೆ ಶಿವಕುಮಾರ್ ಬಳಿ ವಿವರಿಸಿದ್ದು, ಶೀಘ್ರಗತಿಯಲ್ಲಿ ಎರಡೂ ಪ್ರಾಧಿಕಾರಗಳಿಗೆ ಪೂರ್ಣಾವಧಿ ಎಂ ಡಿ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

2) ಬನಶಂಕರಿ ಮೆಟ್ರೋ ಸ್ಟೇಷನ್ & ಬನಶಂಕರಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣಗಳ ಮಧ್ಯೆ ಸ್ಕೈವಾಕ್ ನಿರ್ಮಾಣಕ್ಕೆ 2019 ರಿಂದಲೂ ನಾನು ಒತ್ತಾಯಿಸುತ್ತ ಬಂದಿದ್ದು, ಸ್ಕೈ ವಾಕ್ ನಿರ್ಮಾಣದಿಂದ ಬಹು ಆಯಾಮದ ಸಂಚಾರಕ್ಕೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯು ನೀಲನಕ್ಷೆ 2019 ರಲ್ಲಿಯೇ ತಯಾರಾಗಿದ್ದು, ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆಯೂ ಕೂಡ ಒತ್ತಾಯಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ.

3) ನಮ್ಮ ಮೆಟ್ರೋ ಮಾರ್ಗದ 3ನೆ ಹಂತದ ಕಾಮಗಾರಿಗೆ ಹಿಂದಿನ ರಾಜ್ಯ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದು, ಪರಿಷ್ಕೃತ ಡಿ. ಪಿ.ಆರ್ ಅನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಇನ್ನೂ ಸಲ್ಲಿಕೆಯಾಗಿರುವುದಿಲ್ಲ. ಡಿ.ಪಿ.ಆರ್ ಸಲ್ಲಿಕೆ ವಿಳಂಬದಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲ ಕಾಮಗಾರಿಗಳು ವಿಳಂಬಗೊಳ್ಳುವ ಸಾಧ್ಯತೆಯ ಕುರಿತು ವಿವರಿಸಿದೆ.

4) ಮೆಟ್ರೋ 3ನೆ ಹಂತದ ಕಾಮಗಾರಿಯೊಂದಿಗೆ, ಇದೇ ಮಾರ್ಗದಲ್ಲಿ ಬಹು ಆಯಾಮದ ಫ್ಲೈ ಓವರ್ ನಿರ್ಮಾಣದಿಂದ ವೆಗಾ ಸಿಟಿ ಮಾಲ್ & ನಾಯಂಡಹಳ್ಳಿ ವರೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದರ ಕುರಿತು ಕೂಡ ಇದೇ ಸಮಯದಲ್ಲಿ ವಿವರಿಸಿದ್ದೇನೆ.

5) ನನ್ನ ಲೋಕಸಭಾ ಕ್ಷೇತ್ರದ ಹೊಸಕೆರೆ ಹಳ್ಳಿಯಲ್ಲಿ, ಅಂಡರ್ ಗ್ರೌಂಡ್ ಕೇಬಲ್ ಮೂಲಕ 66 ಕೆವಿ EHT ಲೈನ್ ಎಳೆಯುವದರಿಂದ ಚಿಕ್ಕಮಕ್ಕಳು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದು ಎಂಬುದರ ಬಗ್ಗೆ ವಿವರಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.

6) ಬೆಂಗಳೂರು ಮಹಾನಗರದಲ್ಲಿ, ನಿಯೋಜಿತ ಟನಲ್ ರಸ್ತೆ ನಿರ್ಮಾಣದ ಬದಲಾಗಿ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆ ಇದ್ದು, ಟನಲ್ ಬದಲು ರೈಲು ಮಾರ್ಗ ನಿರ್ಮಾಣವಾದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದ್ದು, ಈ ಸಲಹೆಗಳ ಕುರಿತು ಪರಿಶೀಲಿಸುವುದಾಗಿ ತಿಳಿಸಿರುತ್ತಾರೆ.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕ ಸಾರಿಗೆ ಸಂಚಾರ ಉತ್ತೇಜನ ಅತೀ ದೊಡ್ಡ ಪರಿಹಾರವಾಗಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ.

ನನ್ನ ಎಲ್ಲ ಮನವಿಗಳಿಗೆ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೆಂಗಳೂರಿನ ಅಭಿವೃದ್ಧಿ ಕುರಿತಾದ ಈ ಎಲ್ಲ ಕಾಮಗಾರಿಗಳ ಕುರಿತಾದ ಪರಿಷ್ಕೃತ ಮಾಹಿತಿಗಳನ್ನು ಪರಿಶೀಲಿಸುವುದರೊಂದಿಗೆ, ನಾನು ನಿಮಗೆ ನಿರಂತರವಾಗಿ ಈ ಕುರಿತಾದ ಅಪ್ಡೇಟ್ ಗಳನ್ನು ತಮಗೆ ನೀಡುತ್ತಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲಾ ಅಂತೆಕಂತೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ