Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ರಾಜಕೀಯ ನಿವೃತ್ತಿಗೆ ಹೈಕಮಾಂಡ್​ ಸೂಚನೆ ಕೊಟ್ಟಿದ್ಯಾ? ಈ ಬಗ್ಗೆ ಸದಾನಂದಗೌಡ, ಬಿಎಸ್​ವೈ ಹೇಳಿದ್ದಿಷ್ಟು

ಬಿಜೆಪಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ದಿಢೀರ್ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಸದಾನಂದಗೌಡ್ರು ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಈ ಬಾರಿ ಲೋಕಸಭಾ ಟಿಕೆಟ್​ ಸಿಗಲ್ಲವೆಂದು ನಿವೃತ್ತಿ ಹೇಳಿದ್ರಾ? ಅಥವಾ ಹೈಕಮಾಂಡ್​ ಎಲೆಕ್ಷನ್​ಗೆ ಸ್ಪರ್ಧಿಸದಂತೆ ಪರೋಕ್ಷವಾಗಿ ಚುನಾವಣಾ ರಾಜಕೀಯ ನಿವೃತ್ತಿ ಹೇಳುವಂತೆ ಸೂಚನೆ ಕೊಟ್ಟಿದ್ಯಾ| ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಯಡಿಯೂರಪ್ಪ ಹಾಗೂ ಸದಾನಂದಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಚುನಾವಣಾ ರಾಜಕೀಯ ನಿವೃತ್ತಿಗೆ ಹೈಕಮಾಂಡ್​ ಸೂಚನೆ ಕೊಟ್ಟಿದ್ಯಾ? ಈ ಬಗ್ಗೆ ಸದಾನಂದಗೌಡ, ಬಿಎಸ್​ವೈ ಹೇಳಿದ್ದಿಷ್ಟು
ಸದಾನಂದಗೌಡ, ಯಡಿಯೂರಪ್ಪ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 09, 2023 | 12:39 PM

ಮಂಡ್ಯ, (ನವೆಂಬರ್ 09): ಚುನಾವಣಾ ರಾಜಕೀಯದಿಂದ ಬಿಜೆಪಿ ಸಂಸದ ಡಿವಿ ಸದಾನಂದಗೌಡ( D.V.Sadananda Gowda) ಅವರು ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ಸಂಚಲನಕ್ಕೆ ಕಾರಣವಾಗಿದೆ. ಏಕಾಏಕಿ ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳ್ಳಲು ಕಾರವೇನು? ಹೈಕಮಾಂಡ್ ಏನಾದರೂ ನಿವೃತ್ತಿ ಘೋಷಿಸಲು ಹೇಳಿತ್ತಾ? ಹೀಗೆ ಹಲವು ಪ್ರಶ್ನೆಗಳು ಕಾರ್ಯಕರ್ತರಲ್ಲಿ ಉದ್ಭವಿಸಿವೆ. ಇದರ ಮಧ್ಯೆ ಇದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಚುನಾವಣೆಗೆ ನಿಲ್ಲದಂತೆ ನೇರವಾಗಿ ಕೇಂದ್ರ ಸೂಚಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಇದಕ್ಕೆ   ಸ್ವತಃ ಸದಾನಂದಗೌಡ ಮಾತನಾಡಿ, ಪಕ್ಷ ಏನಾದರೂ ಚಿರತೆ ಹೊಡಿಸುವಂತೆ ಹೇಳಿದರೂ ಸಹ ನಾನು ಅದನ್ನು ಮಾಡುತ್ತೇನೆ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸದಾನಂದಗೌಡ ಹೇಳಿದ್ದೇನು?

ಇನ್ನು ಈ ಬಗ್ಗೆ ಮಂಡ್ಯದಲ್ಲಿಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೂಡ ಅಗಿದ್ದೆ. ಕೇಂದ್ರದಲ್ಲಿ ಏಳು ವರ್ಷ ಮೋದಿ ಜೊತೆ ಇದ್ದೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ. ಬಿಜೆಪಿ ದೊಡ್ಡ ಮಟ್ಟದ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವಾಗ ನನ್ನ ಶವಕ್ಕೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ಒಪ್ಪಲ್ಲ ಎಂದರು.

ಇದನ್ನೂ ಓದಿ: ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ; ಹಾಸನದಲ್ಲಿ ಘೋಷಣೆ

ಪಕ್ಷ ಎಲ್ಲವೂ ಕೊಟ್ಟಿದೆ. 25 ವರ್ಷದ ನಂತರ ಚುನಾವಣಾ ರಾಜಕೀಯ ದೂರ ಆಗಬೇಕು ಎಂದುಕೊಂಡಿದ್ದೇ. ಆದ್ರೆ, ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಸ್ವರ್ಧೆ ಮಾಡಿದ್ದೆ. ಈ ಬಾರಿ ಆರು ತಿಂಗಳ ಮುಂಚೆ ಹೇಳಿದ್ರೆ ಹೊಸಬರನ್ನ ಹುಡುಕಲು ಅನುಕೂಲ ಆಗುತ್ತೆ. ಪಾರ್ಟಿ ಕೆಲಸ ಮಾಡಲು ಅವಕಾಶ ಸಿಗುತ್ತೆ. ಪಕ್ಷ ಏನಾದರೂ ಚಿರತೆ ಹೊಡಿಸುವಂತೆ ಹೇಳಿದರೂ ಸಹ ನಾನು ಅದನ್ನು ಮಾಡುತ್ತೇನೆ. ನಾನು ಯಾರ ಹಿಂದೆ ಚೀಲ ಹಿಡಿದುಕೊಂಡು ಹೋಗಿಲ್ಲ. ಯಾರಿಗೂ ಬೆಣ್ಣೆ ಹಾಕಿಕೊಂಡು ಹೋಗಿಲ್ಲ. ಗುಂಪುಗಾರಿಕೆ ಮಾಡಿಲ್ಲ. ಬಿಜೆಪಿ ಗುಂಪು‌ ಮಾತ್ರ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಹೇಳಿದ್ದಿಷ್ಟು

ಸದಾನಂದ ಗೌಡ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸದಾನಂದ ಗೌಡರಿಗೆ ಕೇಂದ್ರ ಸೂಚನೆ ಕೊಟ್ಟಿದೆ. ಹೀಗಾಗಿ ಅವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಪಕ್ಷ ಹೇಳಿದೆ. ನೇರವಾಗಿ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಆಗಲ್ಲ. ಚುನಾವಣೆಗೆ ನಿಲ್ಲಬೇಡಿ ಎಂದು ನೇರವಾಗಿ ಹೈಕಮಾಂಡ್ ಸದಾನಂದಗೌಡರಿಗೆ ಹೇಳಿದೆ  ಎನ್ನುವ ಅರ್ಥದಲ್ಲಿ ಬಿಎಸ್​ವೈ ಹೇಳಿದ್ದಾರೆ. ಆದ್ರೆ, ನಿವೃತ್ತಿಯಿಂದ ಯಾರ ಒತ್ತಡ ಇಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ. ಒಟ್ಟಿನಲ್ಲಿ ಸದಾನಂಗೌಡ ಅವರ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ