ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ, ವಿನಯ್ ಕುಲಕರ್ಣಿ ಮಂತ್ರಿಯಾಗುತ್ತಾರೆ: ಭವಿಷ್ಯ ನುಡಿದ ಜೈನ ಮುನಿ
Belagavi Jain Muni Prediction On DK Shivakumar: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಜೈನ ಮುನಿಯೊಬ್ಬರು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ, (ನವೆಂಬರ್ 08): ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗುತ್ತಾರೆ ಎಂದು ಹಲಗಾದ ಜೈನ್ ಬಸದಿಯ ಪ.ಪೂ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆ (Loksabha Elections)ಬಳಿಕ ವಿನಯ್ ಕುಲಕರ್ಣಿ(Vinay Kulkarni) ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ. ವಿನಯ್ ಕುಲರ್ಣಿ ಅವರು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿರುವ ಜೈನ್ ಬಸದಿ ಭೇಟಿ ನೀಡಿದ್ದು, ಈ ವೇಳೆ ಜೈನ ಮುನಿ ಸಿದ್ದಸೇನ ಮಹಾರಾಜರು, ನೀವು ಸಚಿವರಾಗುತ್ತೀರಿ, ಧಾರವಾಡ ಜಿಲ್ಲಾ ಉಸ್ತುವಾರಿ ಆಗುತ್ತೀರಿ ಎಂದು ಹೇಳಿ ಆಶೀರ್ವಾದ ಮಾಡಿದ್ದಾರೆ.
ಶಾಸಕ ವಿನಯ್ ಕುಲಕರ್ಣಿಗೆ ಆಶೀರ್ವಾದ ಮಾಡಿದ ಬಳಿಕ ಸಿದ್ದಸೇನ ಮುನಿ ಮಹಾರಾಜರು, ಡಿಕೆ ಶಿವಕುಮಾರ್ ಅವರಿಗೂ ಆಶೀರ್ವಾದ ಕೊಟ್ಟಿದ್ದೇನೆ. ಅವರೂ ಸಹ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ. ಮೊದಲೇ ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿದ್ದ ಡಿಕೆ ಶಿವಕುಮಾರ್ಗೆ ಸಿದ್ದಸೇನ ಮುನಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ.
ಹಲಗಾ ಜೈನ ಬಸದಿಯ ಸಿದ್ದಸೇನ ಮಹಾರಾಜರು ಪ್ರತಿಕ್ರಿಯಿಸಿ, ವಿನಯ್ ಕುಲರ್ಣಿಯವರು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ಸಮುದಾಯಕ್ಕೆ ಬೇಕಾದ ವ್ಯಕ್ತಿ. ಈಗ ಶಾಸಕರಿದ್ದೀರಿ, ಬರುವ ದಿನಗಳಲ್ಲಿ ಸಚಿವರಾಗಿ ಎಂದು ಆಶೀರ್ವಾದ ಕೊಟ್ಟಿದ್ದೇನೆ. ಡಿಕೆ ಶಿವಕುಮಾರ್ ಅವರು ಒಂದು ವರ್ಷ ಮೊದಲು ಇಲ್ಲಿಗೆ ಬಂದಿದ್ದರು. ಬರುವ ಸಮಯದಲ್ಲಿ ಸಿಎಂ ಆಗುತ್ತೀರಿ ಎಂದು ಆಶೀರ್ವಾದ ಕೊಟ್ಟಿದ್ದೆ. ಎನೋ ಒಂದು ಅವಕಾಶ ಇತ್ತು. ಆದ್ರೆ, ಆಗಿಲ್ಲ. ಈಗೂ ನನಗೆ ವಿಶ್ವಾಸ ಇದೆ ಮುಂದೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದರು.
ನಾಳೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಒಂದಲ್ಲ ನೂರು ಪರ್ಸಂಟ್ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಆಶೀರ್ವಾದ ಕೊಟ್ಟಿದ್ದೇನೆ. ಇದರ ಅರ್ಥ ಸಿದ್ದರಾಮಯ್ಯನವರನ್ನ ಕುರ್ಚಿ ಕೆಳಗೆ ಇಳಿಸಿ ಅಂತೇನಲ್ಲ. ಸಿದ್ದರಾಮಯ್ಯನವರಿಗೂ ನನ್ನ ಆಶೀರ್ವಾದ ಇದೆ. 2013ರಲ್ಲಿ ಸಿದ್ದರಾಮಯ್ಯನವರಿಗೆ ನಾನು ಆಶೀರ್ವಾದ ಮಾಡಿದ್ದೆ. ಇಬ್ಬರೂ ಕೂಡಿ ತಾವೇ ಅಡ್ಜಸ್ಟ್‌ಮೆಂಟ್ ಆಗಿ ಅವರು (ಸಿದ್ದರಾಮಯ್ಯ) ಅರ್ಧ ಇವರು(ಡಿಕೆ ಶಿವಕುಮಾರ್ ಅರ್ಧ ಅಧಿಕಾರ ಮಾಡುತ್ತಾರೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣಬಹುಮತ ಪಡೆದುಕೊಂಡ ನಂತ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಕೊನೆಗೆ ಹೈಕಮಾಂಡ್ ನಾಯಕರು ಡಿಕೆ ಶಿವಕುಮಾರ್ ಅವರು ಮನವೊಲಿಸಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ, ಡಿಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗೆ ಸಂಧಾನ ಮಾಡಿ ಕಳುಹಿಸಿದ್ದರು. ಆದರೂ ಸಹ ಮುಂದಿನ ಎರೆಡುವರೆ ವರ್ಷ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟು ಕೊಡಬೇಕೆಂಬ ಮಾತುಗಳು ಕೇಳಿಬಂರುತ್ತಿವೆ. ಮುಂದೆ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಅಧಿಕಾರ ಹಂಚಿಕೆ ಸಂಬಂಧ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ಮಾತುಗಳು ಜೋರಾಗಿವೆ. ಇದರ ಬೆನ್ನಲ್ಲೇ ಜೈನ ಮುನಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಆಶೀರ್ವಚನ ನೀಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Wed, 8 November 23