ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ: ಡಿಸೆಂಬರ್ 4 ರಂದು ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ
ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಮೊದಲ ಬಾರಿಗೆ ಯು.ಟಿ ಖಾದರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಬೆಂಗಳೂರು, ನ.28: ಸ್ಪೀಕರ್ ಸ್ಥಾನದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಲು ಬಿಜೆಪಿ (BJP Protest) ನಿರ್ಧರಿಸಿದೆ.
ಜಮೀರ್ ಅಹ್ಮದ್ ವಿರುದ್ಧ ಬೆಳಗಾವಿಯಲ್ಲಿ ಡಿಸೆಂಬರ್ 4 ರಂದು ಬೃಹತ್ ಪ್ರತಿಭಟನೆಗೆ ಬಿಜೆಪಿ ನಿರ್ಧಾರ ಮಾಡಿದ್ದು, ಸದನದ ಒಳಗೆ, ಹೊರಗೂ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನಾ ಸಿದ್ಧತಾ ಉಸ್ತುವಾರಿಯನ್ನು ಮಹೇಶ್ ಟೆಂಗಿನಕಾಯಿ ಅವರಿಗೆ ನೀಡಲಾಗಿದೆ.
ಸಚಿವ ಜಮೀರ್ ಹೇಳಿಕೆ ಏನು?
ತೆಲಂಗಾಣ ಚುನಾವಣಾ ಅಖಾಡಕ್ಕೆ ಧುಮುಕಿರುವ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಇಂದು ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳ ಬಗ್ಗೆ ಹೇಳುವ ಭರದಲ್ಲಿ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿಯವರು ಜಮೀರ್ ಅಹ್ಮದ್ ರಾಜೀನಾಮೆ ಪಡೆಯುವವರೆಗೆ ಹೋರಾಟ ಮಾಡುತ್ತೇವೆ: ಬಿವೈ ವಿಜಯೇಂದ್ರ
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಮೊದಲ ಬಾರಿಗೆ ಯು.ಟಿ ಖಾದರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಸಚಿವ ಜಮೀರ್ ಹೇಳಿದ್ದರು.
ಈ ಹೇಳಿಕೆಯಿಂದ ಕೆರಳಿದ ವಿಪಕ್ಷ ಬಿಜೆಪಿ ನಾಯಕರು, ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಸ್ಪೀಕರ್ ಪೀಠಕ್ಕೆ ಗೌರವ ನೀಡುತ್ತೇವೆ ಎಂದು ಹೇಳಿದ್ದಾರೆ. ಸ್ಪೀಕರ್ಗೆ ಸಿಗುವುದು ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ. ಸಂವಿಧಾನದ ಬಗ್ಗೆ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗೋದು ಎಂದು ಸಿಟಿ ರವಿ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ