ಮುಂಬೈ: ಪೂರ್ವ ಅಂಧೇರಿ (Andheri (East)) ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ನಾಗ್ಪುರದಲ್ಲಿ ಘೋಷಿಸಿದ್ದಾರೆ. ಬಿಜೆಪಿಯು ಮುರ್ಜಿ ಪಟೇಲ್ (Murji Patel) ಅವರ ನಾಮಪತ್ರ ಹಿಂಪಡೆಯಲು ನಿರ್ಧರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಬಿಜೆಪಿ ಇಂದು ಪೂರ್ವ ಅಂಧೇರಿ ಕ್ಷೇತ್ರದಲ್ಲಿನ ಉಪಚುನಾವಣೆಯಿಂದ ತನ್ನ ಅಭ್ಯರ್ಥಿಯನ್ನು ಹಿಂಪಡೆದಿದ್ದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಹಾದಿ ಸುಗಮವಾಗಿದೆ. ಬಿಜೆಪಿಯ ಮುರ್ಜಿ ಪಟೇಲ್ ಅವರ ನಾಮಪತ್ರವನ್ನು ಬಿಜೆಪಿ ಹಿಂಪಡೆದಿದ್ದು ಇದರಿಂದ ಶಿವಸೇನಾದ ರುತುಜಾ ಲಟ್ಕೆ ಅವರಿಗೆ ಈ ಚುನಾವಣೆ ಸುಲಭವಾಗಲಿದೆ. ರುತುಜಾ ಲಟ್ಕೆ ಆಕೆಯ ಪತಿ ರಮೇಶ್ ಲಟ್ಕೆ ಶಾಸಕರಾಗಿದ್ದ ಅಂಧೇರಿ (ಪೂರ್ವ) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರುತುಜಾ ಲಟ್ಕೆ ಅವರ ಪತಿ, ಶಿವಸೇನಾ ಶಾಸಕ ರಮೇಶ್ ಲಟ್ಕೆ ಈ ವರ್ಷದ ಆರಂಭದಲ್ಲಿ ನಿಧನರಾದರು. ಆಕೆಯ ಬೆಂಬಲಕ್ಕೆ ಬಂದ ಮೊದಲ ನಾಯಕ ಅಂದರೆ ಉದ್ಧವ್ ಠಾಕ್ರೆ ಸೋದರ ಸಂಬಂಧಿ ರಾಜ್ ಠಾಕ್ರೆ.
Maharashtra | BJP state president Chandrashekhar Bawankule has announced in Nagpur that the party will not contest Mumbai's Andheri East assembly by-election and their candidate Murji Patel will withdraw the nomination.
— ANI (@ANI) October 17, 2022
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥರು ನಿನ್ನೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ತಮ್ಮ ಪಕ್ಷದ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕೆಲವು ಗಂಟೆಗಳ ನಂತರ, ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಪಾಳಯದ ಶಾಸಕರೊಬ್ಬರು ಸಹ ಮುಖ್ಯಮಂತ್ರಿಗೆ ಪತ್ರ ಬರೆದು ಬಿಜೆಪಿಯು ಲಟ್ಕೆ ಅವರ ದಿವಂಗತ ಪತಿಗೆ ಗೌರವವಾಗಿ ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಬಾರದು ಎಂದು ಬರೆದಿದ್ದಾರೆ. ನಿನ್ನೆ ಸಂಜೆ ಶಿಂಧೆ ಅವರಿಗೆ ಬರೆದ ಪತ್ರದಲ್ಲಿ ಶಾಸಕ ಪ್ರತಾಪ್ ಸರ್ನಾಯಕ್ ಅವರು ಎಲ್ಲಾ ಪಕ್ಷಗಳು ರುತುಜಾ ಲಟ್ಕೆ ಅವರನ್ನು ಬೆಂಬಲಿಸಬೇಕು, ಚುನಾವಣೆಯಲ್ಲಿ ಗೆಲ್ಲಲು ಅವಕಾಶ ನೀಡಬೇಕು ಎಂದು ಹೇಳಿದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ನವೆಂಬರ್ 3 ರಂದು ಅಂಧೇರಿ ಪೂರ್ವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಹೊಸ ಸದಸ್ಯ (ಎಂಎಲ್‌ಎ) ಅವಧಿ ಕೇವಲ ಒಂದೂವರೆ ವರ್ಷಗಳು. ರಮೇಶ ಲಟ್ಕೆ ಸಾವಿನಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಅವರ ಕೊಡುಗೆಯನ್ನು ಪರಿಗಣಿಸಬೇಕು ಎಂದು ಪವಾರ್ ಹೇಳಿದರು.
ಏಕನಾಥ್ ಶಿಂಧೆ ಬಣವು ತಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ಮುನ್ನವೇ ಹಾಳುಗೆಡವಲು ಪ್ರಯತ್ನಿಸುತ್ತಿದೆ ಎಂದು ಉದ್ಧವ್ ಠಾಕ್ರೆ ಬಣ ಆರೋಪಿಸಿದ್ದು, ಆಕೆಯ ರಾಜೀನಾಮೆಗೆ ಕ್ರಮ ಕೈಗೊಳ್ಳದಂತೆ ಮುಂಬೈ ನಾಗರಿಕ ಸಂಸ್ಥೆಯ ಮೇಲೆ ಪ್ರಭಾವ ಬೀರಿದೆ. ಬೃಹನ್‌ಮುಂಬೈ ಕಾರ್ಪೊರೇಷನ್‌ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ ರುತುಜಾ ಲಟ್ಕೆ ಅವರು ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ನ್ಯಾಯಾಲಯವು ನಾಗರಿಕ ಸಂಸ್ಥೆಗೆ ಆದೇಶಿಸಿದ ನಂತರವೇ ಉಪಚುನಾವಣೆಗೆ ನಾಮಪತ್ರ ಸಲ್ಲಿಸಬಹುದು. ಕಳೆದ ವಾರ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಮುರ್ಜಿ ಪಟೇಲ್, ಪಕ್ಷ ಕೇಳಿದರೆ ಸ್ಪರ್ಧೆಯಿಂದ ಹಿಂದೆ ಸರಿಯಲು ಸಿದ್ಧ ಎಂದು ಹೇಳಿದ್ದರು.
Published On - 1:16 pm, Mon, 17 October 22