Karnataka Breaking Kannada News Highlights: ಸರ್ಕಾರ ಅಧಿಕಾರಕ್ಕೆ ಬಂದಾಯ್ತು, ಸಿಎಂ ಆಗಿ ಸಿದ್ದರಾಮಯ್ಯ(Siddaramaiah), ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಆಯ್ಕೆ ಆಗಿದ್ದಾರೆ. ಆದ್ರೆ ಸಂಪುಟಕ್ಕೆ ಸೇರಿರೋದು ಮಾತ್ರ ಕೇವಲ 8 ಸಚಿವರು. ಇನ್ನೂ 18 ಶಾಸಕರು ಸಚಿವ ಸಂಪುಟಕ್ಕೆ ಸೇರಲಿದ್ದಾರೆ. ಇಂದು ಕೂಡ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತರಿಗೆ ಸಚಿವ ಸ್ಥಾನ ನೀಡಲು ದೆಹಲಿಯಲ್ಲಿ ಪಕ್ಷದ ಉನ್ನತ ನಾಯಕರೊಂದಿಗೆ ಸರ್ಕಸ್ ನಡೆಸುತ್ತಿದ್ದಾರೆ. ಹೀಗಾಗಿ ಸಂಪುಟ ರಚನೆ ತಡವಾಗುತ್ತಿದೆ. ಅದಾಗ್ಯೂ, ನಾಳೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದು ರಾತ್ರಿಯೊಳಗೆ ಸಚಿವರ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ರಾಜಕೀಯ ಬೆಳವಣಿಗೆಗಳ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ (Bengaluru Rain). ಟಿವಿ9 ಡಿಜಿಟಲ್ ಲೈವ್ ಮೂಲಕ ರಾಜಕೀಯ ಹಾಗೂ ಮಳೆಯ ಕ್ಷಣ ಕ್ಷಣದ ಅಪ್ಡೇಟ್ಸ್ ಪಡೆಯಿರಿ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿ ಅಂತಿಮಗೊಂಡಿದೆ. ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ತಲುಪಿದೆ.
ಬೆಂಗಳೂರು: ದೆಹಲಿಯಿಂದ ಒಳ್ಳೆ ಸುದ್ದಿ ಬರುವ ಭರವಸೆ ನನಗಿದೆ. ಅಧಿಕೃತವಾಗಿ ಪಟ್ಟಿ ಬಿಡುಗಡೆಯಾದ ಮೇಲೆ ಎಷ್ಟು ಜನರಿಗೆ ಸಿಗಲಿದೆ ಅನ್ನೂದು ಗೊತ್ತಾಗಲಿದೆ. ನಾನು ವರಿಷ್ಟರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ಕೊಡುತ್ತಾರೆ ಎನ್ನವ ನಂಬಿಕೆ ಇದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನವದೆಹಲಿ: ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಕರೆ ಮಾಡಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ನೀಡಿದ್ದಾರೆ.
ಬೆಂಗಳೂರು: ನಾಳೆ (ಮೇ.27) 23 ಶಾಸಕರು ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಾಂಭವ್ಯ ಪಟ್ಟಿ ಇಲ್ಲಿದೆ: ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಂ.ಸಿ.ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ.ಪಾಟೀಲ್, ಡಾ.ಶರಣ ಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ, ರಹೀಂ ಖಾನ್, ಬಿ.ನಾಗೇಂದ್ರ, ಮಂಕಾಳು ವೈದ್ಯ, ಮಧು ಬಂಗಾರಪ್ಪ, ಬೋಸರಾಜು, ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ್, ಪಿರಿಯಾಪಟ್ಟಣ ವೆಂಕಟೇಶ್ಎಸ್.ಎಸ್.ಮಲ್ಲಿಕಾರ್ಜುನ, ಸಿ.ಪುಟ್ಟರಂಗಶೆಟ್ಟಿ, ಚಲುವರಾಯಸ್ವಾಮಿ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ, ರುದ್ರಪ್ಪ ಲಮಾಣಿ, ಡಾ.ಹೆಚ್.ಸಿ.ಮಹದೇವಪ್ಪ ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದು, ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ರಾಜೀನಾಮೆ ಬಗ್ಗೆ ಆಪ್ತರ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಬೆಂಗಳೂರು: ನಾಳೆ ಬೆಳಗ್ಗೆ ಪೂರ್ಣಪ್ರಮಾಣದ ಸಂಪುಟ ರಚನೆಯಾಗಲಿದೆ. ನಾಳೆ ಬೆಳಿಗ್ಗೆ 22 ರಿಂದ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಹಿರಿಯರು, ಕಿರಿಯರು ಇರುವ ಸಂಪುಟ ರಚನೆಯಾಗಲಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿದ್ದೇವೆ. ಸಚಿವರ ಪಟ್ಟಿ ಬಿಡುಗಡೆ ಇನ್ನೂ 1 ರಿಂದ 2 ಗಂಟೆ ತಡವಾಗಲಿದೆ ಎಂದು ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಹೇಳಿದ್ದಾರೆ.
ನವದೆಹಲಿ: ಸಚಿವ ಸಂಪುಟ ಕುರಿತು ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ಬಳಿಕ ದೆಹಲಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಸ್ಸಾಗುತ್ತಿದ್ದಾರೆ. ಇಂದು (ಮೇ.26) ರಾತ್ರಿಯೊಳಗೆ ಸಿಎಂ ಸಿದ್ದರಾಮಯ್ಯ ನಾಳೆ ಪ್ರಮಾಣ ವಚನ ಕಾರ್ಯಕ್ರಮದ ಬಗ್ಗೆ ಸಂಭವನೀಯ ಸಚಿವರಿಗೆ ಕರೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ರಾತ್ರಿಯೊಳಗಾಗಿ ಸಚಿವ ಸಂಪುಟದ ಪಟ್ಟಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಬೆಂಗಳೂರು: ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡುತ್ತಾರೆ. ಹಲವು ಹೆಸರುಗಳನ್ನು ಅವರು ಮುಂದಿಟ್ಟಿದ್ದಾರೆ. ಎಲ್ಲವೂ ಕೂಡ ಸಿಎಂ ಸಿದ್ದರಾಮಯ್ಯ ವಿವೇಚನೆ ಅವರ ಪರಮಾಧಿಕಾರ. ನಾಳೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವವಾದ ಬಹುಮತ ಸಿಕ್ಕಿದೆ. ತಾವು ಈ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿರಬಹುದು. ಆದರೆ ಈ ಗೆಲುವಿನಲ್ಲಿ ನಿಮ್ಮೆಲ್ಲರ ಪರಿಶ್ರಮವಿದೆ. ನಿರೀಕ್ಷೆಗೂ ಮೀರಿ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೀರಿ. ವರಿಷ್ಠರು ಮುಂದಿನ ಲೋಕಸಭೆ ಚುನಾವಣೆಗೆ ಒತ್ತು ನೀಡಿದ್ದಾರೆ. ಚುನಾವಣೆ ಸೋಲಿನ ಬಗ್ಗೆ ಎದೆಗುಂದದೆ ಪಕ್ಷ ಸಂಘಟನೆ ಮಾಡಿ ಎಂದು ತೀರ್ಥಹಳ್ಳಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.
ನವದೆಹಲಿ: ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಗೆ ಬರುವಂತೆ ಶಾಸಕ ಸುಬ್ಬಾರೆಡ್ಡಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆ ಮೇರೆಗೆ ಶಾಸಕ ಸುಬ್ಬಾರೆಡ್ಡಿ ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸುಬ್ಬಾರೆಡ್ಡಿ ದೆಹಲಿಗೆ ತೆರಳಿದ್ದಾರೆ.
ಬೆಂಗಳೂರು: ಆರ್ಎಸ್ಎಸ್ ನಿಷೇಧ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಾನು ಸವಾಲು ಹಾಕುತ್ತೇನೆ, RSS ನಿಷೇಧಿಸಲಿ ನೋಡೋಣ. ಯಾವುದೇ ಸಂಘ-ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಟೀಕರಣಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ. RSS, ಬಜರಂಗದಳ ನಿಷೇಧ ಬಗ್ಗೆ ಸಿಎಂ ನಿಲುವು ಸ್ಪಷ್ಪಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನರಿಗೆ ತಿಳಿಸಲಿ. ಆರ್ಎಸ್ಎಸ್ ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದರು.
ಗದಗ: ರೋಣ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೊಳೆ ಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಒತ್ತಾಯಿಸಿದ್ದು, ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೇ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ನಾಲ್ಕು ಬಾರಿ ಶಾಸಕರಾದರೂ ಒಂದೇ ಒಂದು ಬಾರಿ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುತ್ತೇವೆ. ಗದಗ ಜಿಲ್ಲಾ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಿದ್ದಾರೆ
ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮುಖಂಡ ಮಾಂತೇಶ ಅಂಗಡಿ ಒತ್ತಾಯ ಮಾಡಿದ್ದಾರೆ.
ಬೆಂಗಳೂರು: ನಾಳೆ ಬೆಳಗ್ಗೆ 11:30ರ ವೇಳೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತದೆ. ಯಾರಿಗೆ ಸಚಿವ ಸ್ಥಾನ ಎಂಬುದು ಪಟ್ಟಿ ಬಿಡಗಡೆ ಬಳಿಕ ಗೊತ್ತಾಗುತ್ತೆ. ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೂ ಅವಕಾಶ ನೀಡಬೇಕು. ಕನಿಷ್ಠ 10 ಹೊಸಬರಿಗೆ ಅವಕಾಶ ನೀಡಬೇಕು ಅಂತ ಹೇಳಿದ್ದೇನೆ. ಅದೇ ರೀತಿ ಈ ಬಾರಿ ಹೊಸಬರಿಗೂ ಅವಕಾಶ ನೀಡುತ್ತಿದ್ದಾರೆ. 1-2 ತಿಂಗಳಿನಲ್ಲಿ ನಿಗಮ ಮಂಡಳಿಗಳ ಸ್ಥಾನ ಸಹ ಭರ್ತಿ ಆಗುತ್ತೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೇ 28ರ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದನ್ನು ಕುಮಾರಸ್ವಾಮಿ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅವರ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದರು. ವಿಧಾನಸಭೆ ಚುನಾವಣೆಯಲ್ಲಿ JDS ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ ಎಂದರು.
ದೇವನಹಳ್ಳಿ: ನಾನು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ದೆಹಲಿಗೆ ಹೋಗಿದ್ದೆ, ಆದರೆ ಬಹಳಷ್ಟು ಹಿರಿಯ ನಾಯಕರು ಪಕ್ಷದಿಂದ ಗೆದ್ದಿದ್ದಾರೆ. ಮುಂದೆ ಒಳ್ಳೆಯ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅನಿಲ್ ಚಿಕ್ಕಮಾದು ಹೇಳುವ ಮೂಲಕ ತನಗೆ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತೇವೆ. ಪಕ್ಷದ ವರಿಷ್ಠರ ತೀರ್ಮಾನದಂತೆ ನಾನು ಕೆಲಸ ಮಾಡುತ್ತೇನೆ. ಪಕ್ಷ ನಿಗಮ ಮಂಡಳಿ ಸೇರಿದಂತೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.
ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ಬಗ್ಗೆ ಟೀಕಿಸಿದ ಕುಮಾರಸ್ವಾಮಿ, ಸಂಸತ್ ಭವನ ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಲ್ಲ. ದೇಶದ ತೆರಿಗೆ ಹಣದಿಂದ ಕಟ್ಟಿರುವ ಭವನ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಧ್ವನಿ ಎತ್ತಿದ್ದಾರೆ. ರಾಷ್ಟ್ರಪತಿಯಾಗಿರುವ ಆದಿವಾಸಿ ಮಹಿಳೆಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಧ್ವನಿ ಎತ್ತಿದೆ. ಯಾವುದೇ ಭವನವನ್ನು ಉದ್ಘಾಟನೆ ಮಾಡಬೇಕಾದಾಗ ರಾಷ್ಟ್ರಪತಿ, ರಾಜ್ಯಪಾಲರನ್ನು ಕರೆದ ಉದಾಹರಣೆ ಇಲ್ಲ. ಛತ್ತೀಸ್ಗಢ ವಿಧಾನಸಭೆ ಅಡಿಗಲ್ಲಿಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿಯನ್ನು ಕರೆದಿದ್ದರೂ. ರಾಜ್ಯಪಾಲರನ್ನು ಕರೆಸಿ ಅಡಿಗಲ್ಲು ಹಾಕಿಸಿರಲಿಲ್ಲ. ಕರ್ನಾಟಕದ ವಿಕಾಸಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈಗ ರಾಷ್ಟ್ರಪತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಬಾಗಲಕೋಟೆ: ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಬಸವೇಶ್ವರ ಸರ್ಕಲ್‌ನಲ್ಲಿ ಘೋಷಣೆ ಕೂಗಲಾಗುತ್ತಿದೆ.
ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನಿನಗೂ ಫ್ರೀ ನನಗೂ ಫ್ರೀ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೀಗ ಕಂಡಿಷನ್ಸ್ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು. ಎಲ್ಲಿಗೂ 5 ಗ್ಯಾರಂಟಿ ಫ್ರೀ ಎಂದಿದ್ದ ಸಿದ್ದರಾಮಯ್ಯ, ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ ಈವರೆಗೆ ಜಾರಿ ಮಾಡಿಲ್ಲ. ಅವರು ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ಯಾವ ಮಹಿಳೆ ಕೂಡ ಟಿಕೆಟ್ ಪಡೆಯಬೇಡಿ. ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವಂತೆ ಹೇಳಿದರು.
ಪಿಎಫ್ ಐ ಸಂಘಟನೆ ದೇಶ ದ್ರೋಹಿ ಕೆಸಲ ಮಾಡುವದನ್ನು ಕೇಂದ್ರ ಸರ್ಕಾರ ಮಾಹಿತಿ ಪಡೆದು ಬ್ಯಾನ್ ಮಾಡಿದೆ. ಭಜರಂಗದಳ, ಅರ್ ಎಸ್ ಎಸ್ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರು ಕಾನೂನಿನ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆಯವರಿಗೆ ಕಾನೂನಿನ ಅರಿವು ಇಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಭಜರಂಗದಳ ನಿಷೇಧ ಮಾಡುವುದು ಕಾಂಗ್ರೆಸ್ ನ ಕನಸು ಅದು ನನಸು ಆಗುವುದಿಲ್ಲ. 2024 ರ ಚುನಾವಣೆಯಲ್ಲಿ ಈ ರೀತಿಯ ಹೇಳಿಕೆಗಳಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದರು.
ತುಮಕೂರು: ಜಿಲ್ಲೆಯ ಕೊರಟಗೆ ತಾಲ್ಲೂಕಿನ ಹಲವೆಡೆ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಾಗಿದೆ. ಹೊಳವನಹಳ್ಳಿ, ಅರಸಾಪುರ, ಕಾಶಾಪುರ, ಹಕ್ಕಿಪಿಕ್ಕಿ ಕಾಲೋನಿ ಗ್ರಾಮದ ಸುತ್ತಾಮುತ್ತಾ ಬಿರುಗಾಳಿ ಮಳೆಯಾಗಿದೆ. ಘಟನೆಯಲ್ಲಿ 8 ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ. ಹೊಳವನಳ್ಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು ಶಾರ್ಟ್ ಸರ್ಕ್ಯೂಟ್ ಆಗಿ ಮೊಹಮದ್ ಆಲಿ ಎಂಬುವರ ಮನೆಗೆ ಬೆಂಕಿ ತಗುಲಿದೆ. ಘಟನೆಯಲ್ಲಿ ಗೃಹಪಯೋಗಿ ವಸ್ತುಗಳು ಭಸ್ಮವಾಗಿವೆ. ಮಾಹಿತಿ ತಿಳಿದು ಕೊರಟಗೆರೆ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಸಚಿವ ಸಂಪುಟ ರಚನೆ ತಡವಾಗುತ್ತಿಲ್ಲ, ಬದಲಾಗಿ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಂಗಳೂರು ನಗರದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಎಂ, ಡಿಸಿಎಂ ವರಿಷ್ಠರ ಜೊತೆ ಮಾತನಾಡುತ್ತಿದ್ದಾರೆ. ಅನೇಕ ಊಹಾಪೋಹಗಳ ನಡೆಯುತ್ತಿದೆ. ಅಧಿಕೃತವಾಗಿ ಆಗುವವರೆಗೂ ಕಾಯಬೇಕು ಎಂದರು. ಸಂಪುಟದಿಂದ ಹಿರಿಯರನ್ನು ಕೈ ಬಿಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾಯಕರು ಹೇಳಿಕೆ ಕೊಟ್ಟಿಲ್ಲ. ಹೊರಗಡೆ ಊಹಾಪೋಹಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ನೋಡಿದ್ದೇವೆ ಅಷ್ಟೆ. ಆದರೆ ಪಕ್ಷದಿಂದ ಈ ಬಗ್ಗೆ ನಮಗೆ ಮಾಹಿತಿ ತಿಳಿದುಬಂದಿಲ್ಲ ಎಂದರು.
ನಮ್ಮ ಅವಧಿಯ ಕಾಮಗಾರಿಗಳನ್ನು ಸರ್ಕಾರ ತಡೆಯುತ್ತಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ. ಇದು 80% ಪರ್ಸೆಂಟ್ ಪಡೆಯುವ ಸರ್ಕಾರ. ನಮ್ಮ ವಿರುದ್ಧ ಕಾಂಗ್ರೆಸ್ನವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ನಡೆಸಲಿ. ಹಿಂದಿನ ಎಲ್ಲ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಜತೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ತೆರಳಿದ್ದಾರೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಸೋನಿಯಾ ನಿವಾಸದಲ್ಲಿ ಚರ್ಚಿಸಿ ತೆರಳಿದ್ದಾರೆ.
ಕರ್ನಾಟಕ ಸರ್ಕಾರದ ಸಚಿವ ಸಂಪುಟ ರಚನೆ ಕಸರತ್ತು ಫೈನಲ್ ಹಂತದಲ್ಲಿದೆ. ಸದ್ಯ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಭೇಟಿಗೆ ತೆರಳಿದ್ದು, ಇತ್ತ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಡಿಕೆ ಶಿವಕುಮಾರ್ ಅವರು ವಾಪಸ್ ದೆಹಲಿಗೆ ಪ್ರಯಾಣ ಕೈಗೊಂಡಿದ್ದಾರೆ.
ಬಜರಂಗದಳ, RSS ಸಂಘಟನೆ ನಿಷೇಧ ನೆಹರೂರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸಾಧ್ಯವೇ ಎಂದು ಚನ್ನಬಸಪ್ಪ ಅವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಮನೆ ಮನೆಯಲ್ಲಿ ಹಿಂದುತ್ವ ಮತ್ತು ಆರ್ಎಸ್ಎಸ್ ಬೆರೆತು ಹೋಗಿದೆ. ಪ್ರಿಯಾಂಕ್ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್ಥ್ ನಾರಾಯಣ, ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
Published On - 9:14 am, Fri, 26 May 23