4-6 ಶಾಸಕರನ್ನು ಬಿಟ್ಟು ಬಹುತೇಕ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್; ಚರ್ಚೆಗೆ ಗ್ರಾಸವಾದ ಯಡಿಯೂರಪ್ಪ ಹೇಳಿಕೆ

|

Updated on: Mar 07, 2023 | 7:56 PM

ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾಲ್ವರಿಂದ ಆರು ಮಂದಿ ಶಾಸಕರನ್ನು ಬಿಟ್ಟು ಮತ್ತೆಲ್ಲ ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಟಿಕೆಟ್ ನೀಡಲಿದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

4-6 ಶಾಸಕರನ್ನು ಬಿಟ್ಟು ಬಹುತೇಕ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್; ಚರ್ಚೆಗೆ ಗ್ರಾಸವಾದ ಯಡಿಯೂರಪ್ಪ ಹೇಳಿಕೆ
ಬಿಎಸ್​ ಯಡಿಯೂರಪ್ಪ
Follow us on

ಬೆಂಗಳೂರು: ನಾಲ್ವರಿಂದ ಆರು ಮಂದಿ ಶಾಸಕರನ್ನು ಬಿಟ್ಟು ಮತ್ತೆಲ್ಲ ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಟಿಕೆಟ್ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿರಬಹುದು ಎಂಬ ಚರ್ಚೆ ಒಂದೆಡೆಯಾದರೆ, ಸಂಸದೀಯ ಮಂಡಳಿಯಲ್ಲಿರುವ ಅವರಿಗೆ ಹೈಕಮಾಂಡ್​​ನಿಂದ ಸುಳಿವು ದೊರೆತಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿಗೆ ಯಾರು ಬರುತ್ತಾರೋ ಅವರನ್ನು ನಾವು ಸ್ವಾಗತಿಸುತ್ತೇವೆ. ವರಿಷ್ಠರು ಎಲ್ಲಿಂದ ಸ್ಪರ್ಧಿಸಲು ಸೂಚನೆ ನೀಡುತ್ತಾರೆಯೋ ಅಲ್ಲಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಬಹುತೇಕ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬಹುದು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದೂ ಅವರು ಆಕ್ಷೇಪಿಸಿದರು.

ಈ ಮಧ್ಯೆ, ನಾಲ್ಕರಿಂದ ಆರು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ದೊರೆಯಲಾರದು ಎಂಬ ಕುರಿತಾಗಿ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಎಸ್​ವೈ ಪಕ್ಷದ ಹಿರಿಯರು. ಸಂಸದೀಯ ಮಂಡಳಿಯಲ್ಲಿಯೂ ಇದ್ದಾರೆ. ಅವರಿಗೆ ಮಾಹಿತಿ ಇರಬಹುದು. ಹಾಗಾಗಿ ಆ ಬಗ್ಗೆ ಹೇಳಿಕೆ ನೀಡಿರಬಹುದು ಎಂದು ಹೇಳಿದ್ದಾರೆ. ಧಾರವಾಡದಲ್ಲಿ ಬಿಎಸ್​ವೈ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಕಾಂಗ್ರೆಸ್ ಬಂದ್​ಗೆ ಅರ್ಥವಿಲ್ಲ; ಬಿಎಸ್​​ವೈ

ಶಾಸಕ ಮಾಡಾಳ್​ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಸಿಕ್ಕಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ಹೈಕೋರ್ಟ್​​ನಿಂದ ಜಾಮೀನು ಸಿಕ್ಕಿದ ಮೇಲೆ ಕಾಂಗ್ರೆಸ್​​ನವರು ಹೋರಾಟ ಮಾಡುವುದು ಎಷ್ಟು ಸರಿ ಎಂದು ಯಾದಗಿರಿಯಲ್ಲಿ ಯಡಿಯೂರಪ್ಪ ಪ್ರಶ್ನಿಸಿದರು. ಕಾಂಗ್ರೆಸ್​​ನವರು ಆ ರೀತಿ ಹೋರಾಟ ಮಾಡಿದರೆ ಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ಮಾಡಿದ ಹಾಗೆ ಆಗುತ್ತದೆ. ಮುಂದೆನಾಗುತ್ತದೆ ಅಂತ‌ ಕಾದು ನೋಡೋಣ. ಈಗಂತೂ ಅವರಿಗೆ ತಕ್ಷಣಕ್ಕೆ ಜಾಮೀನು ಸಿಕ್ಕಿದೆ. ಯಾವುದೇ ರೀತಿಯ ಬಂದ್ ಆಗಲೀ ಪ್ರತಿಭಟನೆ ಆಗಲೀ ಅಗತ್ಯವಿಲ್ಲ. ಕೋರ್ಟ್ ಅವರಿಗೆ ಜಾಮೀನು ಕೊಟ್ಟ ಮೇಲೆ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ಇದನ್ನೂ ಓದಿ: BSY in Belagavi; ವಿರೂಪಾಕ್ಷಪ್ಪರಂತೆ ಸಿದ್ದರಾಮಯ್ಯ ಕೂಡ ನನ್ನ ಆಪ್ತರು: ಬಿಎಸ್ ಯಡಿಯೂರಪ್ಪ

ಜಾಮೀನು ಸಿಕ್ಕಿದ ಮೇಲೆ ಶಾಸಕ ಮಾಡಳ್ ಮೆರವಣಿಗೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಅದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ