ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ನೂತನ ಸದಸ್ಯರಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ನಿನ್ನೆ ಪಕ್ಷದ ಹಿರಿಯ ನಾಯಕರ ಜೊತೆಗೂಡಿ ತಿರುಪತಿಗೆ (Tirupati) ತೆರಳಿ, ತಿಮ್ಮಪ್ಪನ ದರ್ಶನ ದರ್ಶನ ಪಡೆದುಬಂದಿದ್ದಾರೆ. ಆದರೆ ತಿರುಪತಿಯಲ್ಲೂ ಪಕ್ಷ ಸಂಘಟನೆ, ಪ್ರವಾಸದ ಬಗ್ಗೆಯೇ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಎಲ್ಲವನ್ನೂ ಕೂಡಾ ಸರಿ ಮಾಡಬೇಕು ಬೊಮ್ಮಾಯಿ. ಸ್ವಲ್ಪ ಸಡಿಲ ಆಗಿದೆ, ಸ್ವಲ್ಪ ಎಲ್ಲವನ್ನೂ ಟೈಟ್ ಮಾಡಬೇಕು. ನಮ್ಮವರೂ ಕೂಡಾ ಮಾಧ್ಯಮದ ಮುಂದೆ ಇಚ್ಚೆ ಬಂದಂತೆ ಮಾತಾಡುವುದನ್ನು ಸರಿ ಮಾಡಬೇಕು. ಚುನಾವಣಾ ವರ್ಷದಲ್ಲಿ ಹೋರಾಟಗಳು, ಪ್ರತಿಭಟನೆಗಳು ಎಲ್ಲಾ ಬರುತ್ತವೆ. ಅವೆಲ್ಲವನ್ನೂ ನಾವು ಮ್ಯಾನೇಜ್ ಮಾಡಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಶಾಲೆಗಳಲ್ಲಿ ಗಣೇಶೋತ್ಸವ ವಿಚಾರ ಯಾಕೆ ಮಾತಾಡಬೇಕು? ಹಿಂದೆ ಹೇಗೆ ಇತ್ತೋ ಅದನ್ನು ಮುಂದುವರಿಸಿಕೊಂಡು ಹೋಗುವುದು ಬಿಟ್ಟು ಹೊಸದು ಯಾಕೆ ಹೇಳಬೇಕು? ಆ ರೀತಿಯಲ್ಲಿ ಎಲ್ಲಾ ಹೇಳುವ ಅವಶ್ಯಕತೆ ಇರಲಿಲ್ಲ. ಪ್ರವಾಸ ಪಟ್ಟಿ ಮಾಡಿಕೊಂಡು ಅದರಂತೆ ಪ್ರವಾಸ ಮಾಡೋಣ ಎಂದು ಗುರುವಾರ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ (R Ashoka) ಜೊತೆ ಮಾತುಕತೆ ವೇಳೆ ಯಡಿಯೂರಪ್ಪ ಹೇಳಿದ್ದಾರೆ. ಶಾಲೆಗಳಲ್ಲಿ ಗಣೇಶೋತ್ಸವ ವಿಚಾರದಲ್ಲಿ ಶಿಕ್ಷಣ ಸಚಿವ ನಾಗೇಶ್ ಹೇಳಿಕೆ ಬಗ್ಗೆ ಸಿಎಂ ಮುಂದೆ ಪರೋಕ್ಷವಾಗಿ ಆಕ್ಷೇಪದ ರೀತಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
ಮೊಟ್ಟೆ ಎಸೆದು ನಮ್ಮವರು ತಪ್ಪು ಮಾಡುತ್ತಿದ್ದಾರೆ -ಯಡಿಯೂರಪ್ಪ ಬೇಸರ
ಮಡಿಕೇರಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಬೇಸರಗೊಂಡಿದ್ದಾರೆ. ತಿರುಪತಿಯಲ್ಲಿ ನಿನ್ನೆ ಸಿಎಂ ಬೊಮ್ಮಾಯಿ ಜೊತೆ ಮಾತನಾಡುವ ವೇಳೆ ಯಡಿಯೂರಪ್ಪ ಹೀಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಮಾಡುವುದು, ಧಿಕ್ಕಾರ ಕೂಗುವುದು ಇರುತ್ತದೆ. ಆದರೆ ಈ ರೀತಿ ಮೊಟ್ಟೆ ಎಸೆಯುವುದು, ಹಲ್ಲೆ ಮಾಡುವುದೆಲ್ಲಾ ಸರಿಯಲ್ಲ. ಹೋರಾಟ ಮಾಡುವುದು ನಮ್ಮದೂ ಇರುತ್ತದೆ, ಅವರದ್ದೂ ಇರುತ್ತದೆ. ಮೊಟ್ಟೆ ಎಸೆದು ನಮ್ಮವರು ತಪ್ಪು ಮಾಡುತ್ತಿದ್ದಾರೆ ಎಂದು ನಿನ್ನೆ ರಾತ್ರಿ ತಿರುಪತಿಯಲ್ಲಿ ಇದ್ದ ವೇಳೆ ಯಡಿಯೂರಪ್ಪ ತಮ್ಮ ಬೇಸರ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆಶೋಕ್ ಟ್ವೀಟ್ ಮಾಡಿ, ಮೊಟ್ಟೆ ಎಸೆತವನ್ನು ಖಂಡಿಸಿರುವುದು ಗಮನಾರ್ಹವಾಗಿದೆ.
Published On - 3:50 pm, Fri, 19 August 22