ಬಾಗಲಕೋಟೆ, ಡಿಸೆಂಬರ್ 31: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ. ಬಿವೈ ವಿಜಯೇಂದ್ರ ಮುಖ್ಯಮಂತ್ರಿ ಆಗುವವರೆಗೂ ನಾವು ಅವರ ಶಕ್ತಿಯಾಗಿರುತ್ತೇವೆ. ಬಿವೈ ವಿಜಯೇಂದ್ರ ಮೀನಿನ ಮರಿಯಂತೆ. ಮೀನಿನ ಮರಿಗೆ ಈಜು ಕಲಿಸುವ ಅವಶ್ಯಕತೆ ಇಲ್ಲ. ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗಿಂತ ಬಿವೈ ವಿಜಯೇಂದ್ರ ಒಂದು ಹೆಜ್ಜೆ ಮುಂದಿರುತ್ತಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.
ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನವಗರದಲ್ಲಿ ಕಾರ್ಯಕರ್ತರ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸಬೇಕಿದೆ. ಕಳೆದ ಚುನಾವಣೆಯಲ್ಲಿ ತಪ್ಪು ಕಲ್ಪನೆಯಿಂದ ಹಿನ್ನಡೆಯಾಯಿತು. ಕರ್ನಾಟಕದಲ್ಲಿ ಬಿಜೆಪಿ ಬಹಳ ಬಲಿಷ್ಠವಾಗಿದೆ. ಗಡಿಯಲ್ಲಿ ಸೈನಿಕರಿದ್ದಂತೆ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ. ಪ್ರವಾಹ, ಕೊರೊನಾ ಸಂದರ್ಭದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದೇವೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ನಾವು ವಿಫಲವಾದೆವು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮಸ್ಯೆ ಬದಿಗೊತ್ತಿ, ಒಂದಾಗಿ ಕೆಲಸ ಮಾಡಬೇಕಿದೆ. 28 ಕ್ಷೇತ್ರಗಳಲ್ಲೂ ಗೆದ್ದು ದೇಶದಲ್ಲಿ ಕರ್ನಾಟಕ ಪ್ರಥಮ ಎನ್ನಿಸಿಕೊಳ್ಳಬೇಕು ಹಾಗೇ ಕೆಲಸ ಮಾಡೋಣವೆಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಇದನ್ನೂ ಓದಿ: ಅಸಮಾಧಾನದ ನಡುವೆಯೇ ಬಿವೈ ವಿಜಯೇಂದ್ರ ನೇತೃತ್ವದಲ್ಲಿಂದು ಬಿಜೆಪಿ ಪದಾಧಿಕಾರಿಗಳ ಮೊದಲ ಸಭೆ
ಬಾಗಲಕೋಟೆ-ವಿಜಯಪುರ ಭಾಗದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ದೊಡ್ಡ ನೀರಾವರಿ ಹೋರಾಟವನ್ನು ನಾವು ಮಾಡಬೇಕಿದೆ. ಇದು ರಾಜಕೀಯ ಹೋರಾಟ ಅಲ್ಲ, ದೇಶದ ಅಭಿವೃದ್ಧಿಗೆ ಹೋರಾಟ. ನಾವು ಹೋರಾಟಕ್ಕೆ ಸಜ್ಜು ಮಾಡುತ್ತೇವೆ. ಬಜೆಟ್ ಪೂರ್ವ ಒಂದು ಬಾರಿ ಹೋರಾಟ ಮಾಡೋಣ. ಬೆಳಗಾವಿ, ಕಲಬುರಗಿ, ಮಧ್ಯ ಕರ್ನಾಟಕದ ಅಳಿಯ ನೀವು. ನಿಮಗೆ ಹೆಣ್ಣು ಕೊಡುವುದರ ಜೊತೆಗೆ ಶಕ್ತಿನೂ ಕೊಟ್ಟಿದ್ದೇವೆ ಎಂದು ಬಿವೈ ವಿಜಯೇಂದ್ರ ಅವರ ಬಳಿ ಕಾರಜೋಳ ಮನವಿ ಮಾಡಿದರು.
ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೇವಲ ಭಾವನಾತ್ಮಕ ಸಮಸ್ಯೆ ಸೃಷ್ಠಿ ಮಾಡಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ ಒಂದೇ ಒಂದು ಕಾಮಗಾರಿಯೂ ನಡೆದಿಲ್ಲ. ಮೊನ್ನೆಯ ಬೆಳಗಾವಿಯ ಅಧಿವೇಶನ ಕಾಟಚಾರಕ್ಕೆ ನಡೆಸಿದರು. ಕಷ್ಟಕಾಲದಲ್ಲಿ ರಾಜಕೀಯ ಜೀವನ ನೀಡಿದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಜನರಿಗೆ ಋಣ ತಿರಿಸಲು ಒಂದು ರೂಪಾಯಿ ಕೊಡಬೇಕಾಗಿತ್ತು. ಆದರೆ ಕೊಡಲಿಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Sun, 31 December 23