ಬೆಂಗಳೂರು, (ಡಿಸೆಂಬರ್ 27): ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ (BY Vijayendra)ಇಂದು(ಡಿಸೆಂಬರ್ 27) ರಾಜ್ಯ ಪದಾಧಿಕಾರಿಗಳ ತಂಡದ ಸಭೆ ಮಾಡಿದರು. ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಿದರು. ಅಲ್ಲದೇ ಪ್ರಮುಖವಾಗಿ ಪಕ್ಷಕ್ಕೆ ಮುಜುಗರ ತರುವಂತೆ ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಪದಾಧಿಕಾರಿಗಳಿಗೆ ಸೂಚ್ಯವಾಗಿ ಸೂಚನೆ ನೀಡಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ವಿರುದ್ಧ 40 ಸಾವಿರ ಕೋಟಿ ರೂ. ಮೊತ್ತದ ಕೋವಿಡ್ ಅಕ್ರಮದ ಬಗ್ಗೆ ಮಾಡಿರುವ ಆರೋಪ ಈ ಸಭೆಯಲ್ಲಿ ಪ್ರಸ್ತಾಪವಾಯ್ತು. ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಬಹಳ ಡ್ಯಾಮೇಜ್ ಆಗುವ ಬಗ್ಗೆ ಸಭೆಯಲ್ಲಿ ಕೆಲವು ಪದಾಧಿಕಾರಿಗಳಿಂದ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಯತ್ನಾಳ್ ಹೇಳಿಕೆಗಳ ಬಗ್ಗೆ ಕೆಲವು ಪದಾಧಿಕಾರಿಗಳಿಂದ ಸಭೆಯಲ್ಲಿ ಖಂಡನೆ ವ್ಯಕ್ತವಾಗಿದ್ದು, ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಪಕ್ಷಕ್ಕೆ ಮುಜುಗರ ತರುವಂತೆ ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಪದಾಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದ್ದು.ಯತ್ನಾಳ್ ಹೇಳಿಕೆ ಬಗ್ಗೆ ಹೈಕಮಾಂಡ್ ನೋಡಿಕೊಳ್ಳಲಿದೆ ಹೇಳಿದರು.
2024ರ ಲೋಕಸಭಾ ಚುನಾವಣೆವರೆಗೂ ಯಾವೊಬ್ಬ ಪದಾಧಿಕಾರಿಗಳೂ ವಿಶ್ರಮಿಸುವಂತಿಲ್ಲ. ಪದಾಧಿಕಾರಿಗಳ ವರ್ತನೆ ಸೂಕ್ತವಾಗಿರಬೇಕು. ಹಿರಿಯರು, ಬೂತ್ ಕಾರ್ಯಕರ್ತರು, ವರಿಷ್ಠರನ್ನು ಸಮಾನವಾಗಿ ನೋಡಿಕೊಳ್ಳಬೇಕು. ಎಲ್ಲರನ್ನೂ ಒಂದೇ ರೀತಿಯ ವಿಶ್ವಾಸದಿಂದ ನೋಡಬೇಕು. ಹಾಗೇ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು ಎಂದು
ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆಗಳನ್ನು ನೀಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ