ಬೆಂಗಳೂರು(ಡಿಸೆಂಬರ್.27): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರ ನೇತೃತ್ವದಲ್ಲಿ ಇಂದು(ಡಿಸೆಂಬರ್ 27) ಮೊದಲ ರಾಜ್ಯ ಪದಾಧಿಕಾರಿಗಳ ತಂಡದ ಸಭೆ ನಡೆಯಲಿದೆ. ಪಕ್ಷ ಸಂಘಟನೆ, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಂಬಂಧ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಮೊದಲ ಹಂತವಾಗಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಪದಾಧಿಕಾರಿಗಳ ಸಭೆ ನಡೆದರೆ, ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಮಟ್ಟದ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಭೆ ನಡೆಯಲಿದೆ.
ಇಂದಿನ ಪದಾಧಿಕಾರಿಗಳ ಸಭೆ ನಂತರ ವಿಜಯೇಂದ್ರ ಅವರು ನಾಳೆ (ಡಿಸೆಂಬರ್ 27) ರಾಜ್ಯ ಬಿಜೆಪಿಯ ಪ್ರಮುಖರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮಾಜಿ ಸಚಿವರು, ಪ್ರಮುಖರು ಭಾಗವಹಿಸುತ್ತಾರೆ. ಅವರ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ, ಪಕ್ಷದ ಸಂಘಟನೆ ಹಾಗೂ ಲೋಕಸಭಾ ಚುನಾವಣೆ ಎದುರಿಸುವುದರ ಕುರಿತು ಎಲ್ಲರ ಸಲಹೆ ಪಡೆಯಲಿದ್ದಾರೆ. ಅಂತೆಯೇ ಈ ಸಭೆಯಲ್ಲಿ ರಾಜ್ಯದಲ್ಲಿ ತಳಮಟ್ಟಕ್ಕೆ ಸಂಘಟನೆ, ಹೋರಾಟ ಮತ್ತು ಪ್ರತಿಭಟನೆಯ ರೂಪುರೇಷೆ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಮೊನ್ನೇ ಅಷ್ಟೇ ನವದೆಹಲಿಯಲ್ಲಿ ನಡೆದಿದ್ದ ರಾಜ್ಯದ ಎಲ್ಲಾ ರಾಜ್ಯಾಧ್ಯಕ್ಷ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ವಿಜಯೇಂದ್ರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಮೇರೆಗೆ ಹೈಕಮಾಂಡ್ ಹಲವರು ವಿರೋಧದ ನಡುವೆಯೂ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದು, ಅದನ್ನು ಉಳಿಸಿಕೊಳ್ಳಲು ವಿಜಯೇಂದ್ರ ಕಸರತ್ತು ನಡೆಸಿದ್ದಾರೆ. ಹೀಗಾಗಿ ಉಪಾಧ್ಯಕ್ಷ, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಮೋರ್ಚಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್, ವಿ ಸೋಮಣ್ಣ ಸೇರಿದಂತೆ ಇತರೆ ನಾಯಕರ ಅಸಮಾಧಾನದ ನಡುವೆಯೂ ಈ ಸಭೆ ನಡೆಯುತ್ತಿದ್ದು, ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವುದು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ