ಬೆಂಗಳೂರು, (ಡಿಸೆಂಬರ್ 20): ಮುಂಬರುವ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕದಲ್ಲಿ ಬಿಜೆಪಿ ಜತೆ ಸೀಟು ಹಂಚಿಕೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆ ನಡೆಸಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಇಂದು (ಡಿ. 20) ಸಂಜೆ ದೆಹಲಿಗೆ (New Delhi) ತೆರಳಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಹ ದಿಲ್ಲಿಗೆ ಹಾರಿದ್ದಾರೆ. ಇದರಿಂದ ಇತ್ತ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಲೋಕಸಭೆ ಚುನಾವಣೆಯಲ್ಲಿ 5 ರಿಂದ 7 ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಒಲವು ಹೊಂದಿದ್ದು, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ರಾಜ್ಯಾಧ್ಯಕ್ಷ ಸಮ್ಮುಖದಲ್ಲಿ ಕ್ಷೇತ್ರ ಹಂಚಿಕೆ ಫೈನಲ್ ಮಾಡಲು ಬಿವೈ ವಿಜಯೇಂದ್ರಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ವಿಜಯೇಂದ್ರ ಆಗಲಿ ಕುಮಾರಸ್ವಾಮಿ ಆಗಲಿ ದೆಹಲಿಯ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.
ಇನ್ನು ದೆಹಲಿಗೆ ಹೋಗುವ ಮುನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದೆಹಲಿಗೆ ಹೋಗುತ್ತಿದ್ದೇನೆ. ಆದ್ರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾನು ವೈಯುಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಿಂದ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿ ವಿಮಾನ ಹತ್ತಿದರು.
ಕುಮಾರಸ್ವಾಮಿ ದೆಹಲಿಯತ್ತ ಹೊರಟ ಬೆನ್ನಲ್ಲೇ ವಿಜಯೇಂದ್ರ ಸಹ ದಿಲ್ಲಿಗೆ ಹೋಗಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯೇಂದ್ರ, ಡಿಸೆಂಬರ್ 22, 23ರಂದು ಪೂರ್ವನಿಗದಿ ಕಾರ್ಯಕ್ರಮ ಹಿನ್ನೆಲೆ ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರ ಸಭೆ ಕರೆಯಲಾಗಿದೆ. ಇದೇ ವೇಳೆ ವರಿಷ್ಠರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇನೆ, ಎಂಪಿ ಚುನಾವಣೆ ಸಂಬಂಧ ಸೀಟು ಹಂಚಿಕೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಷ್ಟ್ರೀಯ ನಾಯಕರ ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ. ಎಂಪಿ ಚುನಾವಣೆ ಸಂಬಂಧ ಸೀಟು ಹಂಚಿಕೆ ವಿಚಾರದ ಬಗ್ಗೆ ಚರ್ಚೆ ಇಲ್ಲ. ಜೆಡಿಎಸ್ ಎಷ್ಟು ಸ್ಥಾನ ಬೇಡಿಕೆ ಇಟ್ಟಿದೆ ಎನ್ನುವುದು ನಮಗೆ ಗೊತ್ತಿಲ್ಲ. ಸೀಟುಗಳ ಹಂಚಿಕೆ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಜೆಡಿಎಸ್ ವರಿಷ್ಠರ ಬೇಡಿಕೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಲಿದೆ. ರಾಷ್ಟ್ರೀಯ ನಾಯಕರ ಎದುರು ನಮ್ಮ ಅಭಿಪ್ರಾಯಗಳನ್ನ ತಿಳಿಸಲಿದ್ದೇವೆ ಎಂದು ಹೇಳಿದರು.
ಏಳು ಕ್ಷೇತ್ರಗಳನ್ನು ಜಡಿಎಸ್ಗೆ ನೀಡಬೇಕೆಂದು ಕುಮಾರಸ್ವಾಮಿ ಬೇಡಿಕೆ ಇಡುವ ಸಾಧ್ಯತೆ ಇದೆ. ರಾಮನಗರ, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಏಳು ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ ಎನ್ನಲಾಗಿದೆ. ಒಂದು ವೇಳೆ ಇದಕ್ಕೆ ಬಿಜೆಪಿ ಹೈಕಮಾಂಡ್ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ಒಪ್ಪದಿದ್ದರೆ ಕನಿಷ್ಠ 5 ಕ್ಷೇತ್ರಕ್ಕೆ ಪಟ್ಟುಹಿಡಿಯುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ದೆಹಲಿ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಜೆಡಿಎಸ್ಗೆ ಎಷ್ಟು ಕ್ಷೇತ್ರಗಳು ಸಿಗಲಿದೆ ಎನ್ನುವು ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ