ಬೆಂಗಳೂರು, ಸೆ.24: ಚುನಾವಣೆ ಪೂರ್ವದಲ್ಲಿ ಉಚಿತ ಘೋಷಣೆಗಳನ್ನು ಮಾಡಿದ್ದ ಕಾಂಗ್ರೆಸ್, ನನಗೂ ಫ್ರೀ ನಿನಗೂ ಫ್ರೀ ಎಂದು ಹೇಳಿತ್ತು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ (C.T.Ravi) ಅವರು ಕಾವೇರಿ ನೀರಿನ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಮಹದೇವಪ್ಪ ನಿನಗೂ ಫ್ರೀ ಕಾಕಾಪಾಟೀಲ್ ನಿನಗೂ ಫ್ರೀ ಅಂತಾ ಹೇಳಿದ್ದರು. ಈಗ ಕಾಂಗ್ರೆಸ್ ತಮಿಳುನಾಡು ಸಿಎಂ ಸ್ಟಾಲಿನ್ಗೂ ನೀರು ಫ್ರೀ ಎಂದಿದೆ ಎಂದರು.
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಲೇವಡಿ ಮಾಡಿದ ಸಿ.ಟಿ.ರವಿ, ತಮಿಳುನಾಡು ತಮ್ಮ ಬೆಳೆಗೆ ನೀರು ಕೇಳುತ್ತಿದೆ. ಆದರೆ ನಮಗೆ ಕುಡಿಯಲು ನೀರಿಲ್ಲ. ಪ್ರಗತಿಪರರ ನಿರ್ಣಯದ ಹೋರಾಟಕ್ಕೆ ನಮ್ಮ ಬೆಂಬಲವಿರಲಿದೆ. ಸೆ.26ರ ಬೆಂಗಳೂರು ಬಂದ್‌ಗೆ ಬಿಜೆಪಿ ಬೆಂಬಲ ನೀಡಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದ ಬಂದ್‌ಗೆ ಬಿಜೆಪಿ ಬೆಂಬಲ ನೀಡಲಿದೆ ಎಂದರು.
ಬೆಂಗಳೂರು ಬಂದ್ ಬೆಂಬಲಿಸುವಂತೆ ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದ ಸಿಟಿ ರವಿ, ಶಾಂತಿ ಕಾಪಾಡಿಕೊಂಡು ತಾವೆಲ್ಲರೂ ಚಳುವಳಿಯಲ್ಲಿ ಭಾಗವಹಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದು ನೀವೆ ಅಲ್ವಾ. ಜನ ನಿಮಗೆ ಮತ ನೀಡಿದ್ದಾರೆ ಅಲ್ವಾ? ಮತ್ತೆ ನೀವ್ಯಾಕೆ ನೀರು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ತಮಿಳುನಾಡು ಕೇಳುವ ಮೊದಲೇ ನೀವು ಯಾಕೆ ನೀರು ಬಿಟ್ಟಿರಿ? ಇಂಡಿಯಾ ಮೈತ್ರಿಕೂಟ ಉಳಿಸಿಕೊಳ್ಳಲು ರಾಜ್ಯದ ಹಿತ ಬಲಿ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಿಟಿ ರವಿ, ವಾಡಿಕೆ ಮಳೆಗಿಂತ ಶೇ.42 ರಷ್ಟು ಕಡಿಮೆ ಮಳೆಯಾಗಿದೆ ಎಂದು ಸರ್ಕಾರವೇ ತಿಳಿಸಿದೆ. ಕೆಆರ್ಎಸ್ನಲ್ಲಿ ಉಳಿದಿರುವುದೇ 20 ಟಿಎಂಸಿ ನೀರು. ತಮಿಳುನಾಡಿಗೆ ನೀರು ಬಿಟ್ಟರೆ 7 ಟಿಎಂಸಿ ಹೋಗುತ್ತದೆ. ಉಳಿದ ನೀರಲ್ಲಿ ಡೆಡ್‌ಸ್ಟೋರೆಜ್ 5 ಟಿಎಂಸಿ ಆಗುತ್ತದೆ. ಬೆಂಗಳೂರಿನ ಜನತೆಗೆ ಕುಡಿಯಲೂ ನೀರು ಇರಲ್ಲ ಎಂದರು.
ರಾಜಕೀಯ ಹಿನ್ನಡೆ ಆಗುತ್ತದೆ ಎಂದು ಆ ನಾಯಕರು ಬೆಂಗಳೂರಿಗೆ ಬರಲ್ಲ ಎಂದು ಒಲೈಸಲು ನೀರು ಬಿಟ್ಟಿದ್ದೀರಿ. ದೇವರನ್ನು ಒಲೈಸುವಂತೆ ತಮಿಳುನಾಡಿನ ಡಿಎಂಕೆಗೆ ನೀರು ಬಿಟ್ಟು ಒಲೈಸುತ್ತಿದ್ದಾರೆ. ತಮಿಳುನಾಡು ಸಚಿವರು ನೀರು ನಿಮ್ಮಪ್ಪಂದ ಎಂದು ಪ್ರಶ್ನಿಸುತ್ತಿದ್ದಾರೆ. ನೀರು ಬಿಡುವ ಮೂಲಕ ನಮ್ಮ ಹಕ್ಕು ನಿಮ್ಮದೇ ಎಂದು ನೀರು ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಹಣವೇ ಪ್ರಧಾನ ಆಗಿದ್ದರೆ ಬೈಂದೂರು, ಸುಳ್ಯದಲ್ಲಿ ಬಡ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತಿರಲಿಲ್ಲ: ಸಿಟಿ ರವಿ
ಸಿ.ಟಿ ರವಿಗೆ ಬೇರೆ ಎಲ್ಲೂ ಜಾಗ ಇಲ್ಲ ಅದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕೌಂಟರ್ ಕೊಟ್ಟ ಸಿಟಿ ರವಿ, ಅವರು ಗೆದ್ದಿದ್ದಾರೆ, ನಾನು ಸೋತಿದ್ದೇನೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ನನ್ನ ಸೋಲು ಹೇಗಾಯ್ತು ಅಂತ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಹಂಕಾರದ ಮಾತುಗಳಿಂದ ಎಲ್ಲವೂ ಗೆಲ್ಲಲು ಸಾಧ್ಯವಿಲ್ಲ. ಸೋಲು ಶಾಶ್ವತವಲ್ಲ. ಜನರಿಗೆ ಒಳ್ಳೆಯದು ಮಾಡಿ ಎಂದು ಜನ ಮತ ನೀಡಿದ್ದಾರೆ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇಂಡಿಯಾ ಒಕ್ಕೂಟದೊಳಗೆ ಕಾಂಗ್ರೆಸ್ ಇದೆ. ತಮಿಳುನಾಡಿಗೆ ರಾಜ್ಯದ ಸ್ಥಿತಿಯನ್ನು ನಿಮಗೆ ಮನವರಿಕೆ ಮಾಡಿಕೋಡಲು ಸಾಧ್ಯ ಇಲ್ಲವೇ? ನಿಮ್ಮ ಸಂಬಂಧ ಮೋದಿ ವಿರೋಧ ಮಾತ್ರನ? ರಾಜ್ಯದ ಹಿತ ಕಾಪಾಡೋಕೆ ಸಾಧ್ಯವಿಲ್ಲವೇ? ಕರ್ನಾಟಕ ಬಚಾವ್ ಮಾಡಲು ನಿಮ್ಮ ಸಂಬಂಧ ಬಳಸಿಕೊಳ್ಳಬೇಕಾಗಿತ್ತು.
ಇಂಡಿಯಾ ಒಕ್ಕೂಟಕ್ಕೂ ನಮಗೂ ವ್ಯತ್ಯಾಸವಿದೆ. ನಮ್ಮಲ್ಲಿ ಸ್ಪಷ್ಟತೆ ಇದೆ, ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿ ಎಂಬ ಉದ್ದೇಶ ಹೊಂದ್ದಿದ್ದೇವೆ. ಇಂಡಿಯಾ ಒಕ್ಕೂಟದಲ್ಲಿ ಯಾರ ನೇತೃತ್ವ ಎಂಬುದೇ ಪ್ರಶ್ನೆಯಾಗಿದೆ. ಇಂಡಿಯಾ ಒಕ್ಕೂಟದಲ್ಲಿ ಡಜನ್ ನಾಯಕರು ಇದ್ದಾರೆ, ಯಾರು ಮೋದಿ ಹತ್ತಿರಕ್ಕೂ ಬರಲು ಆಗುತ್ತಿಲ್ಲ ಎಂದರು.
ನಮ್ಮ ಅಜೆಂಡಾ ಸ್ಪಷ್ಟವಾಗಿದೆ. ಕೆಳ ಹಂತದಲ್ಲಿ ಕಾರ್ಯಕರ್ತರನ್ನು ಸಮನ್ವಯ ಸಾಧಿಸಬೇಕು. ವೈಚಾರಿಕ ಭಿನ್ನಾಭಿಪ್ರಾಯ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು. ರಾಜ್ಯ ನಾಯಕರ ಕಡೆಗಣನೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ನಾಯಕರನ್ನ ಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತಾರೆ. ಯಾವುದೇ ಹಂತದಲ್ಲಿ ಕೇಂದ್ರ, ರಾಜ್ಯ ಅನ್ನೋ ಭೇದ ಭಾವವಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ