ರಾಮನಗರ: ಕೆಲವೇ ತಿಂಗಳಲ್ಲಿ ರಾಜ್ಯ ರಾಜಕಾರಣದ ದಿಕ್ಕು ಬದಲಾಗಲಿದೆ ಎಂದು ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಭವಿಷ್ಯ ನುಡಿದಿದ್ದಾರೆ. ರಾಮನಗರ ಜಿಲ್ಲೆಯ ಕೂಡ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಐದು ದಿನದಿಂದ ಬೆಳವಣಿಗೆ ನಡೆಯುತ್ತಿದೆ. ಏನು ಆಗುತ್ತೆ, ಪರಿಸ್ಥಿತಿ ಎಲ್ಲಿಗೆ ಹೊಗುತ್ತೆ ಅಂತ ಗೊತ್ತಿದೆ. ಈ ಸರ್ಕಾರದಲ್ಲಿ ಹೆಚ್ಚಿನ ಅನುದಾನ ಬರುತ್ತದೆ ಎಂದು ಇಟ್ಟುಕೊಳ್ಳಲು ಸಾದ್ಯವಿಲ್ಲ ಎಂದರು. ಕಾಂಗ್ರೆಸ್ (Congress) ಸರ್ಕಾರದಿಂದ ದೊಡ್ಡ ದೊಡ್ಡ ಅಭಿವೃದ್ಧಿ ಕಾರ್ಯಕ್ರಮ ಆಗುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ನಾನು ನಿಮ್ಮ (ಕಾರ್ಯಕರ್ತರು) ಜೊತೆ ಕೈ ಜೋಡಿಸುತ್ತೇನೆ. ಆಕ್ಟೋಬರ್ ನವೆಂಬರ್ ಅಷ್ಟರಲ್ಲಿ ರಾಜಕೀಯ ದಿಕ್ಕು ಕಾಣುತ್ತದೆ. ನಾಲ್ಕೈದು ತಿಂಗಳು ಸರ್ಕಾರಕ್ಕೆ ಸಮಯ ಕೊಡಬೇಕು ಎಂದರು.
ನಿಮ್ಮೆಲ್ಲರ ದುಡಿಮೆ, ನಿಷ್ಟಾವಂತ ಕಾರ್ಯಕರ್ತರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಆಗಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ನಾಲ್ಕೈದು ತಿಂಗಳಿಂದ ಕುಮಾರಸ್ವಾಮಿ ಹಿನ್ನಡೆಯಾಗಬಹುದು ಎಂದು ಚರ್ಚೆ ನಡೆಯುತ್ತಿತ್ತು. ನಾನು ನಿಮ್ಮ ಮೇಲೆ ನಂಬಿಕೆ ಇಷ್ಟು ಪಕ್ಷ ಸಂಘಟನೆಗೆ ಮುಂದಾಗಿದ್ದೆ. ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಹೋಗಿ ಎಂದು ಒತ್ತಡ ಹೇರಿದ್ದರು. ಆದರೆ ಕುತಂತ್ರಕ್ಕೆ ಬಲಿಯಾಗದೇ ರಕ್ಷಣೆ ನೀಡುತ್ತಾರೆ ಎಂಬ ನಂಬಿಕೆ ನನಗೆ ಇತ್ತು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಸಮಾಜದ ಮೇಲೆ ಹಲವಾರು ರೀತಿಯ ಆತಂಕ ಸೃಷ್ಟಿ ಮಾಡಿದ್ದರು. ಎರಡನೇ ಸಮಾಜದ ಮೇಲೆ ಒತ್ತಡ ಹಾಕಿ ಬಿಜೆಪಿ ಜೊತೆ ಸರ್ಕಾರ ಮಾಡುತ್ತಾರೆ ಎಂದು ಒತ್ತಡ ಹಾಕಿದ್ದಾರೆ. ಹಾಗಂತ ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ಹಿಂದೆ ದೇವೇಗೌಡರ ವಿರುದ್ದ ರಾಜಕೀಯ ಷಡ್ಯಂತರ ಮಾಡಿ ಮುಗಿಸಲು ಹೋಗಿದ್ದರು. ಆದರೆ ಆನಂತರ ದೇವೇಗೌಡರು ಪ್ರಧಾನಿ ಸಹಾ ಆಗಿದ್ದರು. ಪಕ್ಷದ ಮೇಲೆ ಕಾರ್ಯಕರ್ತರ ಜೊತೆ ದೇವರ ಅನುಗ್ರಹ ಇದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ; ಇಂದಿರಾ ಕ್ಯಾಂಟೀನ್ಗೆ ಸಿಗಲಿದೆ ಮರುಜೀವ
ಪ್ರತಿಗ್ರಾಮಕ್ಕೆ ಭೇಟಿ ಕೊಡುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯಾವ ರೀತಿ ಸ್ವಂದಿಸುತ್ತಾರೆ ನೋಡೋಣ. ಕಾಂಗ್ರೆಸ್ ಜನರ ಮುಂದೆ ಇಟ್ಟಿರುವ ಕಾರ್ಯಕ್ರಮಗಳನ್ನ ಅನುಷ್ಠಾನ ತರುವುದು ಅಷ್ಟು ಸುಲಭವಲ್ಲ. ಸ್ವಲ್ಪ ದಿನ ನಾವು ಕಾಯಬೇಕು. ರಸ್ತೆ, ನೀರಾವರಿಗೆ ಹೇಗೆ ಅನುದಾನ ಕೊಡುತ್ತಾರೆ ನೋಡಬೇಕು. ಸ್ವಾಭಿಮಾನ ಕಳೆದುಕೊಂಡು ನಾನು ಯಾವ ಸಿಎಂ ಮುಂದೆ ಹೋಗಲ್ಲ. ಕಲಾಪದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವುದೇ ಸಂದರ್ಭದಲ್ಲಿ ಸ್ಪಂದಿಸುತ್ತೇನೆ. ಒಂದೊಂದು ಸಮಾಜಕ್ಕೆ ಸೇರಿಸುವ ಮಾಜಿ ಸಚಿವರು, ಶಾಸಕರಿಗೆ ಜವಬ್ದಾರಿ ಕೊಡಬೇಕು ಮುಂದಾಗಿದ್ದೇನೆ. ಕಠಿಣ ಟಾಸ್ಕ್ ಕೊಡುತ್ತೇನೆ. ಹೆಚ್ಚಿನ ಜವಬ್ದಾರಿಯನ್ನ ಪಕ್ಷದ ಮುಖಂಡರಿಗೆ ನೀಡುತ್ತೇನೆ. ರಾಮನಗರ ಜಿಲ್ಲೆಯಲ್ಲಿ ನಾನೇ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಹೀನಾಯ ಸೋಲು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಜೆಡಿಎಸ್ ಮುಗಿಸಬೇಕು ಎನ್ನುವ ನಡವಳಿಕೆ ಹಾಗೂ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ ಎಂದರು. ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ಕೊಡುತ್ತಾರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕ್ತಿದ್ದಾರೆ ನೋಡೋಣ ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Thu, 18 May 23