ಚಿಕ್ಕಬಳ್ಳಾಪುರ; ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ

| Updated By: ಗಣಪತಿ ಶರ್ಮ

Updated on: Aug 22, 2023 | 6:56 PM

BN Bache Gowda; ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮೊಮ್ಮಗ, ಮೊಮ್ಮಗಳು ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಹಿಗಾಗಿ ನಿವೃತ್ತಿಯಾಗುತ್ತಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಬಿಎನ್ ಬಚ್ಚೇಗೌಡ ಹೇಳಿದ್ದಾರೆ.

ಚಿಕ್ಕಬಳ್ಳಾಪುರ; ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ
Follow us on

ಚಿಕ್ಕಬಳ್ಳಾಪುರ, ಆಗಸ್ಟ್ 22: ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ (Bache Gowda) ಮಂಗಳವಾರ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ‌ಲೋಕಸಭಾ ಕ್ಷೇತ್ರದ (Chikkaballapur Lok Sabha Constituency) ಬಿಜೆಪಿ ಸಂಸದರಾಗಿರುವ ಬಚ್ಚೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ ಎಪ್ಪತ್ತು ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ ಎಂಬತ್ತೊಂದು ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ‌ ಆಚರಣೆ ಮಾಡಿಕೊಂಡಿದ್ದೇವೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಅಂತ ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಮೋದಿ ಅವರು ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮೊಮ್ಮಗ, ಮೊಮ್ಮಗಳು ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಹಿಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಎನ್ ಬಚ್ಚೇಗೌಡ ಅವರ ಮಗ ಶರತ್​​ ಬಚ್ಚೇಗೌಡ ಕಾಂಗ್ರೆಸ್ ಶಾಸಕರಾಗಿದ್ದಾರೆ. ಶರತ್ ಕುಮಾರ್ ಬಚ್ಚೇಗೌಡ ಹೊಸಕೋಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಮತ್ತು ಹಾಲಿ ಸಚಿವ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದಾರೆ. 2019 ರಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಸ್ವತಂತ್ರವಾಗಿ ಸ್ಪರ್ಧಿಸಿದ್ದಕ್ಕಾಗಿ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ನಂತರ ಅವರು ಕಾಂಗ್ರೆಸ್ ಸೇರಿದ್ದರು.

ಬಚ್ಚೇಗೌಡ ಯಾರು?

ಬಿಎನ್ ಬಚ್ಚೇಗೌಡ ಅವರು ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಆಗ ಹೆಚ್​ಡಿ ದೇವೇಗೌಡರ ಗುಂಪಿನ ಭಾಗವಾಗಿದ್ದರು. ನಂತರ ಬಿಜೆಪಿ ಸೇರಿದ ಅವರು 2008 ರಿಂದ ಬಿಜೆಪಿ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಐದು ಬಾರಿ (1978, 1985, 1994, 1999, 2008 ರಲ್ಲಿ) ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು 1989, 2004, 2013 ರಲ್ಲಿ ಹೊಸಕೋಟೆಯಲ್ಲಿ ಸೋತ ಅಭ್ಯರ್ಥಿಯಾಗಿದ್ದರು. ಅವರು 2013 ರಲ್ಲಿ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು ಹಾಗೂ ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಿಂದ ಸೋತರು. ಅವರು 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು ಆದರೆ ಸೋತರು. 2019 ರಲ್ಲಿ ಮರಳಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಬಿಎನ್ ಬಚ್ಚೇಗೌಡ ವಾಗ್ದಾಳಿ; ಏನೇನಂದ್ರು ಬಿಜೆಪಿ ಸಂಸದ?

ಬಚ್ಚೇಗೌಡರ ಅಭಿಮಾನಿಗಳಿಗೆ ಬೇಸರ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದರೂ ಆಗಿರುವ ಬಿ.ಎನ್.ಬಚ್ಚೇಗೌಡ, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೊಷಣೆ ಮಾಡಿರುವುದು ಅವರ ಅಭಿಮಾನಿಗಳು ಹಾಗೂ ಅವರ ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ಇನ್ನೂ ಬಚ್ಚೇಗೌಡರಿಗೆ ವಯಸ್ಸಿನ ಕಾರಣ ಹಾಗೂ ಅನಾರೋಗ್ಯದ ಕಾರಣ ಈ ಭಾರಿ ಬಿಜೆಪಿ ಹೈಕಮಾಂಡ್ ಲೋಕಸಭಾ ಟಿಕೆಟ್ ನೀಡಲ್ಲವೆಂದು ಸೂಚನೆ ಕೊಟ್ಟಿದ್ದಾಗಿ ಬಚ್ಚೇಗೌಡರು ಹೇಳಿಕೊಂಡಿದ್ದಾರೆ.

ರಾಜಕೀಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Tue, 22 August 23