ಅತಂತ್ರ ಫಲಿತಾಂಶ ಬಂದರೆ ಮಾತ್ರ ಜೆಡಿಎಸ್​ಗೆ ಸ್ವಾತಂತ್ರ್ಯ: ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2022 | 3:31 PM

Karnataka Politics: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಸಂಘರ್ಷವಿದೆ. ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅತಂತ್ರ ಫಲಿತಾಂಶ ಬಂದರೆ ಮಾತ್ರ ಜೆಡಿಎಸ್​ಗೆ ಸ್ವಾತಂತ್ರ್ಯ: ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ಹರಿದಾಡುತ್ತಿರುವುದು ಸುಳ್ಳುಸುದ್ದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸ್ಪಷ್ಟಪಡಿಸಿದರು. ಇದೇ ವೇಳೆ ‘ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಅನಿವಾರ್ಯ’ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಕುಮಾರಸ್ವಾಮಿ ಸದಾಶಯ ಸದಾ ಹಾಗೆಯೇ ಇರುತ್ತದೆ. ಅತಂತ್ರ ಫಲಿತಾಂಶ ಬಂದರೆ ಮಾತ್ರ ಜೆಡಿಎಸ್​ಗೆ ಸ್ವಾತಂತ್ರ್ಯ’ ಎಂದು ವ್ಯಂಗ್ಯವಾಡಿದರು.

ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ರಮೇಶ್ ಜಾರಕಿಹೊಳಿ ಜತೆ ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಅವರನ್ನೇ ವಿಚಾರಿಸಿ ನೋಡುತ್ತೇನೆ ಎಂದರು.

ಬಿಜೆಪಿಯ ಕೆಲ ಶಾಸಕರೂ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಹಳಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆಂದು ನಿನ್ನೆ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇಂದು ಚುನಾವಣೆ ಸಂದರ್ಭದಲ್ಲಿ ಕೆಲ ಶಾಸಕರು ಬರಬಹುದು ಎನ್ನುತ್ತಿದ್ದಾರೆ. ಇದರಿಂದಲೇ ಸಿದ್ದರಾಮಯ್ಯ ಹೇಳಿಕೆ ಸುಳ್ಳು ಎಂಬುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಸಂಘರ್ಷವಿದೆ. ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ. ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂದು ಡಿಕೆಶಿ ಸಹ ಹೇಳುತ್ತಿದ್ದಾರೆ’ ಎಂದು ವಿವರಿಸಿದರು.

ಗ್ರಾಮಒನ್ ಮಹತ್ವದ ಕಾರ್ಯಕ್ರಮ
ಗಣರಾಜ್ಯೋತ್ಸವದಂದು ಗ್ರಾಮಒನ್ ಯೋಜನೆಗೆ ಚಾಲನೆ ನೀಡಿದ್ದೇವೆ. ಇದು ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಡುವ ದಿನ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರ. ಹೀಗಾಗಿ ತಂತ್ರಜ್ಞಾನ ಆಧರಿಸಿದ ಗ್ರಾಮಒನ್ ಕಾರ್ಯಕ್ರಮ ಆರಂಭ ಮಾಡಿದ್ದೇವೆ. ತಾಲೂಕು ಕಚೇರಿಗಳಲ್ಲಿ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಸಾಮಾನ್ಯವಾಗಿ ಜನಸಂದಣಿ ಇರುತ್ತದೆ. ಸಮಯಕ್ಕೆ ಸರಿಯಾಗಿ ಹಲವು ಪ್ರಮಾಣಪತ್ರಗಳು ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ತಡೆಯಲು ಗ್ರಾಮಒನ್ ಸಹಕಾರಿ ಎಂದು ಬೊಮ್ಮಾಯಿ ನುಡಿದರು.

ಗ್ರಾಮಒನ್ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ 15ರಿಂದ 20 ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಮೂಲಕ 100 ಸೇವೆ ಒದಗಿಸುವ ಉದ್ದೇಶವಿದೆ. ಮಾರ್ಚ್​ ಅಂತ್ಯದೊಳಗೆ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಯೋಜನೆ ಆರಂಭವಾಗಲಿದೆ. ಗ್ರಾಮಒನ್​ ಕೇಂದ್ರಗಳ ಮೇಲುಸ್ತುವಾರಿಗೂ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಹೆಸರು ಬಹಿರಂಗಪಡಿಸಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ
ಇದನ್ನೂ ಓದಿ: ಮುಳುಗುವ ಹಡಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ; ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕಾರಜೋಳ ತಿರುಗೇಟು

Published On - 3:29 pm, Wed, 26 January 22