ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಭಾನುವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಚ್.ಕೆ.ಕುಮಾರಸ್ವಾಮಿ ಅವರು ಇಬ್ರಾಹಿಂಗೆ ಅಧಿಕಾರ ವಹಿಸಿಕೊಟ್ಟರು. ಮಾಜಿ ಪ್ರಧಾನಿ ದೇವೇಗೌಡ ಸಮ್ಮುಖದಲ್ಲಿ ಬೆಂಗಳೂರಿನ ಜೆ.ಪಿ.ಭವನದ ಜೆಡಿಎಸ್ ಕಚೇರಿಯಲ್ಲಿ ಅಧಿಕಾರ ಹಸ್ತಾಂತರ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ನಿಕಟಪೂರ್ವ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದಲ್ಲಿ ಹೊಸಪರ್ವ ಆರಂಭವಾಗಿದೆ. ಯಾರಿಗೆ ಕೃತಜ್ಞತೆ ಇರುತ್ತೋ ಅವರು ಭಾವುಕರಾಗುತ್ತಾರೆ. ನಾನು ಏನೂ ಕೇಳದಿದ್ದರೂ ನನ್ನನ್ನು ಎಚ್.ಡಿ.ದೇವೆಗೌಡರು ಬೆಳೆಸಿದ್ದಾರೆ. ಇದೀಗ ಸಿ.ಎಂ.ಇಬ್ರಾಹಿಂ ನಮ್ಮ ಪಕ್ಷಕ್ಕೆ ಬಂದಿರುವುದು ತುಂಬಾ ಖುಷಿಯಾಗಿದೆ. ಪಕ್ಷ ನನ್ನ ಹಕ್ಕು, ಅಧಿಕಾರ ನನ್ನ ಹಕ್ಕಲ್ಲ. ಎಲ್ಲರಿಗೂ ಅಭಿನಂದನೆ ಸಲ್ಲಿಸಿ ರಾಜ್ಯಾಧ್ಯಕ್ಷ ಸ್ಥಾನವನ್ನು ಖುಷಿಯಿಂದ ಬಿಟ್ಟುಕೊಡುತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಶಾಂತಿ ಕಾಪಾಡುವ ಮತ್ತು ಕರ್ನಾಟವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳುವ ಸಾಮರ್ಥ್ಯ ಜೆಡಿಎಸ್ಗೆ ಮಾತ್ರವೇ ಇದೆ ಎಂದರು. ಬಿಜೆಪಿ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡುತ್ತಿವೆ ಎಂದರು.
ಸಮಾಜದಲ್ಲಿ ಮುಸ್ಲಿಮರ ವಿರುದ್ಧ ಕೆಟ್ಟ ಭಾವನೆ ಮೂಡುವಂತೆ ಮಾಡಲು ಬಿಜೆಪಿ ಯತ್ನಿಸುತ್ತಿದೆ. ನೀವು ಪ್ರಚೋದನೆಗೆ ಒಳಪಡುವ ಮೂಲಕ ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ. ದುಷ್ಕರ್ಮಿಗಳು ಯಾವುದೇ ಧರ್ಮದಲ್ಲಿದ್ದರೂ ಅಂಥವರನ್ನು ಕಾಪಾಡದೇ, ಶಿಕ್ಷೆಗೆ ಒಳಪಡಿಸಬೇಕು. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಜತೆಗಿನ ಮೃತ ಸಂತೋಷ್ ಪಾಟೀಲ್ ಫೋಟೋಗಳು ವೈರಲ್
Published On - 11:34 am, Sun, 17 April 22