ಬೆಂಗಳೂರು, ನವೆಂಬರ್ 15: ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಟೀಕಾ ಪ್ರಹಾರ ನಡೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡಿರುವ ಕಾರಣ ಹೆಚ್ಡಿಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಪ್ಪು ಆಗಿದೆ ನನಗೆ ಪಶ್ಚಾತ್ತಾಪ ಆಗಿದೆ ಎಂದರೆ ಅದು ಶಿಕ್ಷೆಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಉತ್ತರವನ್ನೇ ಕೊಡಲ್ಲ. ಯಾಕೆಂದರೆ ಅವರು ಬರೀ ಸುಳ್ಳೇ ಹೇಳ್ತಾರೆ. ಅವರ ಸುಳ್ಳುಗಳಿಗೆಲ್ಲ ನಾನು ಉತ್ತರ ಕೊಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್ ಪಾರ್ಟಿಯೇ ಅಲ್ಲ, ಅದು ದೇವೇಗೌಡ & ಫ್ಯಾಮಿಲಿ ಪಾರ್ಟಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ.
ಇದನ್ನೂ ಓದಿ: ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಎಸ್ಟಿ ಸೋಮಶೇಖರ್ ಗೈರಾಗಿದ್ದೇಕೆ? ಕಾರಣ ಕೊಟ್ಟ ಶಾಸಕ
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದ ಕುಮಾರಸ್ವಾಮಿ, ತಮ್ಮ ಗಮನಕ್ಕೆ ಬಾರದೆ ಆ ರೀತಿ ನಡೆದಿದೆ. ಬೆಸ್ಕಾಂ ಅಧಿಕಾರಿಗಳು ಬಂದು ತನಿಖೆ ನಡೆಸಲಿ. ಸಂಪೂರ್ಣ ಸಹಕಾರ ನೀಡುವೆ. ಬೆಸ್ಕಾಂ ವಿಧಿಸುವ ದಂಡವನ್ನೂ ಪಾವತಿಸುವೆ ಎಂದು ಹೇಳಿದ್ದರು.
ಇನ್ನು ಜೆಡಿಎಸ್ ಕಚೇರಿಯ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬ ಭಿತ್ತಿಪತ್ರಗಳನ್ನು ಮಂಗಳವಾರ ರಾತ್ರಿ ಅಂಟಿಸಿರುವುದು ವಿವಾದ ಮತ್ತಷ್ಟು ಕಾವು ಪಡೆಯುವಂತೆ ಮಾಡಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Wed, 15 November 23