ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಎಸ್ಟಿ ಸೋಮಶೇಖರ್ ಗೈರಾಗಿದ್ದೇಕೆ? ಕಾರಣ ಕೊಟ್ಟ ಶಾಸಕ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಬಣದಲ್ಲಿ ಗುರುತಿಸಿಕೊಂಡಿರುವ ಬಹುತೇಕ ಎಲ್ಲಾ ನಾಯಕರು ಇಂದಿನ ವಿಜಯೇಂದ್ರ ಪದಗ್ರಹ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇನ್ನು ಈ ಬಗ್ಗೆ ಶಾಸಕ ಎಸ್ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.
ಬೆಂಗಳೂರು, (ನವೆಂಬರ್ 15): ಬಿವೈ ವಿಜಯೇಂದ್ರ (BY Vijayendra) ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು(ನವೆಂಬರ್ 15) ಅಧಿಕಾರ ಸ್ವೀಕಾರ ಮಾಡಿದರು. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಿದರು. ಆದ್ರೆ, ವಿಜಯೇಂದ್ರ ಪದಗ್ರಹಣಕ್ಕೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಬಣದಲ್ಲಿ ಗುರುತಿಸಿಕೊಂಡಿರುವ ಬಹುತೇಕ ಎಲ್ಲಾ ನಾಯಕರು ಇಂದಿನ ವಿಜಯೇಂದ್ರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇನ್ನು ಈ ಬಗ್ಗೆ ಶಾಸಕ ಎಸ್ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ನನ್ನ ಕ್ಷೇತ್ರದ್ದೇ ಕಾರ್ಯಕ್ರಮ ಇದ್ದಿದ್ದರಿಂದ ನನಗೆ ಹೋಗಲು ಆಗಲಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ನನ್ನ ಕ್ಷೇತ್ರದ್ದೇ ಕಾರ್ಯಕ್ರಮ ಇದ್ದಿದ್ದರಿಂದ ನನಗೆ ಹೋಗಲು ಆಗಲಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಗೃಹ ಸಚಿವರು ಬರುತ್ತಿದ್ದಾರೆ. ಸಚಿವರ ಕಾರ್ಯಕ್ರಮ ಮುಗಿದ ಬಳಿಕ ನಾನು ಪಕ್ಷದ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಸಷ್ಟಪಡಿಸಿದರು.
ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಬಿವೈ ವಿಜಯೇಂದ್ರ ಅವರ ಆಯ್ಕೆ ಸರಿಯಾಗಿದೆ. ಇಂದಿನ ಸ್ಥಿತಿಗೆ ಅವರ ಆಯ್ಕೆ ನೂರಕ್ಕೆ ನೂರರಷ್ಟು ಸರಿಯಾಗಿದೆ. ಈ ಹಿಂದೆ ವಿಜಯೇಂದ್ರ ಅವರು ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಅವರಿಗೆ ಅನುಭವ ಇದೆ. ಎಲ್ಲ ಜಿಲ್ಲೆಯ ನಾಯಕರ ಪರಿಚಯ ಅವರಿಗೆ ಇದೆ. ಹೀಗಾಗಿ ಮುಂದಿನ ಚುನಾವಣೆಗೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.
ಇದು ಕುಟುಂಬ ರಾಜಕೀಯ ಅಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ. ವಿಜಯೇಂದ್ರ ಅವರು ಬಿಜೆಪಿಗಾಗಿ ದುಡಿದಿದ್ದಾರೆ. ಈಗ ಎಂಎಲ್‌ಎ ಆಗಿದ್ದಾರೆ. ಹೀಗಾಗಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಎಂದು ಎಸ್.ಟಿ. ಸೋಮಶೇಖರ್ ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡರು.
ನನ್ನನ್ನು ಯಾರು ಬೇಕಿದ್ದರೂ ಕಡೆಗಣಿಸಲಿ ಬಿಡಲಿ, ಕ್ಷೇತ್ರದ ಜನ ನನ್ನನು ಕಡೆಗಣಿಸಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ 40 ಮಂದಿ ಮಹಿಳೆಯರ ಮೂಲಕ ಗ್ಯಾರಂಟಿ ತಲುಪುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಇದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬ ದೃಷ್ಟಿಯಷ್ಟೇ ನನ್ನದು. ಈ ಹಿಂದೆ ಮೈಸೂರು ಉಸ್ತುವಾರಿ ಸಚಿವನಾಗಿದ್ದ ವೇಳೆ ಕೇವಲ ಮೂರು ಕ್ಷೇತ್ರದಲ್ಲಷ್ಟೆ ಬಿಜೆಪಿ ಇತ್ತು. ಹೀಗಿದ್ದರೂ, ಉಳಿದ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದೆ. ಅದೇ ರೀತಿ ಈಗಲೂ ನಡೆಯುತ್ತಿದೆ. ಬಿಜೆಪಿಯಲ್ಲಿ ನಾನು ಗೆದ್ದಿದ್ದೇನೆ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಮಾಡಬಾರದಾ? ಎಂದು ಎಸ್.ಟಿ. ಸೋಮಶೇಖರ್ ಪ್ರಶ್ನಿಸಿದರು.