ಬೆಳಗಾವಿ: ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಜಿಲ್ಲಾ ವಿಭಜನೆ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿರುವ ಮಧ್ಯೆ ಜಿಲ್ಲೆ ವಿಭಜನೆ ಮಾಡುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾವು ಬೆಳಗಾವಿ ವಿಭಜನೆಗೆ ಬದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿದ್ದಾರೆ. ಜಿಲ್ಲೆ ವಿಭಜನೆ ಆಗಲೇಬೇಕು ಅದರಲ್ಲಿ ಪ್ರಶ್ನೆ ಇಲ್ಲ. ಬಹಳದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಮಾಡುತ್ತೇವೆ. ಒತ್ತಡವೂ ಮಾಡುತ್ತೇವೆ ಎಂದರು.
ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದರೂ, ಚಿಕ್ಕೋಡಿ ಆದರೂ ಮೂರು ಜಿಲ್ಲೆಯಾದರೂ ನಂದು ಎಂಟ್ರಿ ಇದೆ. ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಯಜಮಾನಿಗೆ 2 ಸಾವಿರ ರೂ. ನೀಡುವ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, 2 ಸಾವಿರ ಯಾರು ತೆಗೆದುಕೊಳ್ಳಬೇಕೆಂದು ಷರತ್ತು ಹಾಕಬೇಕು ಅಲ್ವಾ? ಅತ್ತೆ ಸೊಸೆಗೆ ಕೊಡಿ ಅಂತಾ ಹೇಳಿದರೂ ಷರತ್ತು ಆಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮೊದಲು ಅತ್ತೆಗೆ ಕೊಡುವುದು. ಅತ್ತೆ ಪ್ರೀತಿಯಿಂದ ಸೊಸೆಗೆ ಕೊಡುವುದಾದರೆ ಅದನ್ನು ಬರೆಯಬೇಕಾಗುತ್ತದೆ ಎಂದರು.
ಪಠ್ಯದಲ್ಲಿ ಅನವಶ್ಯಕವಾಗಿ ಸೇರಿಕೊಂಡಿದ್ದನ್ನು ಬದಲಾಯಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಮಾಡಿಯೇ ಮಾಡುತ್ತೇವೆ. ಪಠ್ಯದಿಂದ ಯಾವುದನ್ನು ತೆಗೆಯಬೇಕೆಂದು ಚರ್ಚೆ ಆಗುತ್ತದೆ. ನಾವು ಎನ್‌ಇಪಿ ಪರವಾಗಿಲ್ಲ, ನಾವು ಎನ್‌ಇಪಿ ವಿರುದ್ಧ ಇದ್ದೇವೆ. ಇದನ್ನು ತಕ್ಷಣಕ್ಕೆ ತೆಗೆದು ಹಾಕಲು ಸಾಧ್ಯವಿಲ್ಲ. ತಜ್ಞರ ವರದಿ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Tue, 30 May 23